ರಾಜಕೀಯ

ದೋಸ್ತಿಗಳ 8-20 ಸೂತ್ರ: ಸೀಟು ಹಂಚಿಕೆ ಫೈನಲ್

ಬೆಂಗಳೂರು: ಹಲವು ದಿನಗಳ ಜಗ್ಗಾಟದ ಬಳಿಕ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಸೀಟು ಹಂಚಿಕೆ ಕೊನೆಗೂ ಫೈನಲ್‌ ಆಗಿದೆ. 8 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಇನ್ನುಳಿದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸುತ್ತಿದೆ. ಇದರೊಂದಿಗೆ, ರಾಜ್ಯದಲ್ಲಿ ಆಡಳಿತಾರೂಢ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ನೇರಾನೇರ ಫೈಟ್‌ಗೆ ಅಖಾಡ ಅಣಿಯಾದಂತಾಗಿದೆ.

ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಉತ್ತರ, ಶಿವಮೊಗ್ಗ, ಉಡುಪಿ -ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ವಿಜಯಪುರ ಈ 8 ಕ್ಷೇತ್ರಗಳು ಜೆಡಿಎಸ್‌ಗೆ ಲಭಿಸಿವೆ. ತವರು ಮೈಸೂರು ಜಿಲ್ಲೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪ್ರಯತ್ನದಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಆದರೆ, ಹಾಲಿ ಕಾಂಗ್ರೆಸ್‌ ಸಂಸದ ಮುದ್ದಹನುಮೇಗೌಡ ಪ್ರತಿನಿಧಿಸಿರುವ ತುಮಕೂರು ಕ್ಷೇತ್ರ ‘ಕೈ’ಬಿಟ್ಟುಹೋಗಿದೆ. ಡಿಸಿಎಂ ಜಿ. ಪರಮೇಶ್ವರ್‌ಗೆ ಇದು ಹಿನ್ನಡೆ ಎಂದೇ ಹೇಳಲಾಗಿದೆ.

ಉತ್ತರ ಕನ್ನಡ ಕ್ಷೇತ್ರವನ್ನು ಕಾಂಗ್ರೆಸ್‌ ಪಕ್ಷ ಉಳಿಸಿಕೊಳ್ಳಬೇಕು ಎಂಬ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕಿ ಮಾರ್ಗರೇಟ್‌ ಆಳ್ವ ಪ್ರಯತ್ನ ಕೈಗೂಡಿಲ್ಲ. ಅಂತೆಯೇ, ವಿಜಯಪುರ ಎಸ್‌ಸಿ ಮೀಸಲು ಕ್ಷೇತ್ರ ಬಿಟ್ಟುಕೊಡಲು ಗೃಹ ಸಚಿವ ಎಂ.ಬಿ.ಪಾಟೀಲ್‌ ವ್ಯಕ್ತಪಡಿಸಿದ್ದ ವಿರೋಧಕ್ಕೆ ಕಿಮ್ಮತ್ತು ಸಿಕ್ಕಿಲ್ಲ. ಆದರೆ, ಸಮರ್ಥ ಅಭ್ಯರ್ಥಿಗಳಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ ಪಕ್ಷವು ಉಡುಪಿ-ಚಿಕ್ಕಮಗಳೂರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಸುಸೂತ್ರವಾಗಿಯೇ ಜೆಡಿಎಸ್‌ಗೆ ಒಪ್ಪಿಸಿದೆ.  ದಿಲ್ಲಿಯಲ್ಲಿ ಬುಧವಾರ ಬೆಳಗ್ಗೆ ನಿಗದಿಯಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನೀಶ್‌ ಆಲಿ ನಡುವಿನ ಸಭೆ ಸಂಜೆ ಕೇರಳದ ಕೊಚ್ಚಿನ್‌ನಲ್ಲಿ ನಡೆಯಿತು. ಉಭಯ ನಾಯಕರ ಚರ್ಚೆ ಬಳಿಕ ಮೈತ್ರಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಸಂಭವನೀಯ ಜೆಡಿಎಸ್‌ ಅಭ್ಯರ್ಥಿಗಳು… 
ಮಂಡ್ಯ:ನಿಖಿಲ್‌ ಕುಮಾರಸ್ವಾಮಿ
ಹಾಸನ:ಪ್ರಜ್ವಲ್‌ ರೇವಣ್ಣ
ತುಮಕೂರು: ಎಚ್‌.ಡಿ.ದೇವೇಗೌಡ/ ಎಸ್‌.ಪಿ.ಮುದ್ದಹನುಮೇಗೌಡ (ಜೆಡಿಎಸ್‌ಗೆ ಸೇರ್ಪಡೆಯಾದರೆ)
ಉತ್ತರ ಕನ್ನಡ:ಆನಂದ ಅಸ್ನೋಟಿಕರ್‌
ಉಡುಪಿ ಚಿಕ್ಕಮಗಳೂರು:ಎಸ್‌.ಎಲ್‌.ಭೋಜೇಗೌಡ/ಆರತಿ ಕೃಷ್ಣ
ಶಿವಮೊಗ್ಗ:ಮಧು ಬಂಗಾರಪ್ಪ
ಬೆಂಗಳೂರು ಉತ್ತರ:ಎಚ್‌.ಡಿ.ದೇವೇಗೌಡ
ವಿಜಯಪುರ: ನಾಗಠಾಣ ಶಾಸಕ ದೇವಾನಂದ ಚವ್ಹಾಣ್‌ ಪತ್ನಿ ಸುನೀತಾ ರಾಥೋಡ್‌/ ಮಾಜಿ ಶಾಸಕ ದಿ. ಆರ್‌.ಕೆ.ರಾಥೋಡ್‌ ಪುತ್ರ ಸುನೀಲ್‌ ರಾಥೋಡ್‌ ಸ್ಥಳೀಯ ಕಾಂಗ್ರೆಸಿಗರ ವಿರೋಧ ಎಲ್ಲೆಲ್ಲಿ? ವಿಜಯಪುರ, ಉತ್ತರ ಕನ್ನಡ, ತುಮಕೂರು, ಮಂಡ್ಯ, ಹಾಸನ

About the author

ಕನ್ನಡ ಟುಡೆ

Leave a Comment