ರಾಜ್ಯ ಸುದ್ದಿ

ದೋಸ್ತಿ ಸರಕಾರ ಉಳಿಸಿಕೊಳ್ಳಲು ರಾಹುಲ್‌ ತಾಕೀತು

ಬೆಂಗಳೂರು: ಹೇಗಾದರೂ ಮಾಡಿ ದೋಸ್ತಿ ಸರಕಾರವನ್ನು ಉಳಿಸಿಕೊಳ್ಳಲೇಬೇಕು ಎಂದು ಪಕ್ಷದ ನಾಯಕರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಾಕೀತು ಮಾಡಿದ್ದಾರೆ. ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಹಾಗೂ ಪ್ರಮುಖರೊಂದಿಗೆ ದೂರವಾಣಿಯಲ್ಲಿ ಮಾತಾಡಿರುವ ಅವರು, ಸರಕಾರ ಅಸ್ಥಿರಗೊಳಿಸುವ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ಹೂಡಲೇಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವರೆಗೆ ಬೆಂಗಳೂರಿನಿಂದ ಕದಲದಂತೆಯೂ ವೇಣುಗೋಪಾಲ್‌ಗೆ ಸೂಚಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್‌ ಶಾಸಕರು ಬೆಂಗಳೂರಿಗೆ ಬರುವಂತೆ ಬುಲಾವ್‌ ಮಾಡಲಾಗಿದ್ದು, ಅಗತ್ಯ ಕಂಡರೆ ಅವರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲಾಗುತ್ತದೆ.

ಬುಧವಾರ ಸಂಜೆಯ ವೇಳೆಗೆ ಈ ನಿರ್ಧಾರವಾಗಲಿದೆ ಎಂದು ಗೊತ್ತಾಗಿದೆ. ದಿಲ್ಲಿಯಲ್ಲಿರುವ ರಾಜ್ಯ ಕಾಂಗ್ರೆಸ್‌ನ ಪ್ರಮುಖರೂ ರಾಹುಲ್‌ ಜತೆಗೆ ಸಮಾಲೋಚಿಸಿದ್ದಾರೆ. ರಾಜ್ಯದಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಇದರಿಂದ ಸಮಸ್ಯೆ ಎದುರಾಗುತ್ತಿದೆ. ವೇಣುಗೋಪಾಲ್‌ ಅವರಿಗೆ ಈ ಸಂಬಂಧ ತಿಳಿ ಹೇಳುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲೂ ಪಕ್ಷದ ಕೆಲವು ಹಿರಿಯರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ ಶಾಸಕರೂ ಈ ವಿಚಾರದಲ್ಲಿ ದನಿಗೂಡಿಸಿದ್ದಾರೆ ಎನ್ನಲಾಗಿದೆ.

ಸಿಎಂಗೆ ಕಿವಿಮಾತು: ತಮ್ಮನ್ನು ಭೇಟಿಯಾದ ಸಿಎಂ ಎಚ್‌ಡಿಕೆ ಅವರಿಗೆ ಕಿವಿಮಾತು ಹೇಳಿರುವ ವೇಣುಗೋಪಾಲ್‌, ಶಾಸಕರ ಅಹವಾಲು ಸ್ವೀಕರಿಸಬೇಕು. ಕಾಂಗ್ರೆಸ್‌ ಶಾಸಕರ ಮನವಿಗೂ ಸ್ಪಂದಿಸಬೇಕು. ಸರಕಾರದ ಮುಖ್ಯಸ್ಥರಾಗಿ ಗೊಂದಲಕಾರಿ ಹೇಳಿಕೆ ನೀಡಕೂಡದು. ಇದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

ಶ್ರೀಮಂತ್‌ ಪಾಟೀಲ್‌ ಪ್ರತ್ಯಕ್ಷ : ಬಿಜೆಪಿ ತೆಕ್ಕೆಗೆ ಜಾರುತ್ತಿದ್ದಾರೆ ಎನ್ನಲಾಗಿದ್ದ ಶಾಸಕ ಸೀಮಂತ ಪಾಟೀಲ್‌ ರಾತ್ರಿ ವೇಳೆಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಕಾಣಿಸಿಕೊಂಡರು. ಸಚಿವ ಸತೀಶ್‌ ಜಾರಕಿಹೊಳಿ ಜತೆಗಿದ್ದರು. ತಾವು ಪಕ್ಷ ತೊರೆಯುವುದಿಲ್ಲವೆಂದು ವೇಣುಗೋಪಾಲ್‌ ಭೇಟಿ ಬಳಿಕ ಪಾಟೀಲ್‌ ಹೇಳಿದರು.

About the author

ಕನ್ನಡ ಟುಡೆ

Leave a Comment