ದೇಶ ವಿದೇಶ

ದ್ವಿಪಕ್ಷೀಯ ಶೃಂಗಸಭೆ: ಪರಮಾಣು ಶಕ್ತಿ ವಲಯದಲ್ಲಿ ಪರಸ್ಪರ ಸಹಕಾರಕ್ಕೆ ಭಾರತ-ರಷ್ಯಾ ಒಪ್ಪಿಗೆ

ನವದೆಹಲಿ: 19ನೇ ಭಾರತ-ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಯಲ್ಲಿ 8 ಪ್ರಮುಖ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳ ನಾಯಕರು ಸಹಿ ಮಾಡಿದ್ದು, 3ನೇ ವಿಶ್ವ ರಾಷ್ಟ್ರಗಳೊಂದಿಗೆ ಪರಮಾಣು ಸಹಯೋಗ ವಿಸ್ತರಿಸಲು ಒಪ್ಪಿಗೆ ನೀಡಿವೆ. ಶೃಂಗಸಭೆ ಬಳಿಕ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದ್ವಿಪಕ್ಷೀಯ ಸಂಬಂಧದಲ್ಲಿ ಇಂದಿನಿಂದ ಹೊಸ ಪರ್ವ ಆರಂಭವಾಗಿದೆ. ಜಾಗತಿಕ ಪರಿಸ್ಥಿತಿ ಹಾಗೂ ಬೇಡಿಕೆಗೆ ತಕ್ಕಂತೆ ಭಾರತ-ರಷ್ಯಾ ನಡುವಿನ ವ್ಯವಹಾರದಲ್ಲಿ ಇನ್ನಷ್ಟು ವೃದ್ದಿಯಾಗಲಿದೆ ಎಂದು ಭರವಸೆ ನೀಡಿದರು. ಈ ಮೂಲಕ ಅಮೆರಿಕಾದೊಂದಿಗಿನ ಸ್ನೇಹದ ಜೊತೆಗೆ ದಶಕಗಳ ಹಿಂದಿನ ಮಿತ್ರ ರಾಷ್ಟ್ರ ರಷ್ಯಾವನ್ನು ಕಡೆಗಣಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಜಾಗತಿಕ ಪ್ರಸರಣವನ್ನು ಬಲಪಡಿಸಲು ಉಭಯ ರಾಷ್ಟ್ರಗಳು ಬದ್ಧವಾಗಿದ್ದು, ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತಕ್ಕೆ ಸದಸ್ಯತ್ವ ಸ್ಥಾನ ಸಿಗುವ ಕುರಿತು ಬೆಂಬಲ ನೀಡುವುದಾಗಿ ರಷ್ಯಾ ಇದೇ ವೇಳೆ ಹೇಳಿದೆ.
ಕೂಡಂಕುಳಂ ಅಣು ಶಕ್ತಿ ಕೇಂದ್ರ ವಿಸ್ತರಣೆ ಮಾಡುವ ಕುರಿತಂತೆ ಮಾತುಕತೆ ನಡೆಸಲಾಗಿದೆ. ಕೂಡಂಕುಳಂನಲ್ಲಿನ ಅಣುವಿದ್ಯುತ್ ಸ್ಥಾವರಗಳ ನಿರ್ಮಾಣ ಪೂರ್ಣಗೊಂಡ ನಂತರ ಇನ್ನೊಂದು ಸ್ಥಾವರ ಅಭಿವೃದ್ಧಿಗೆ ಜಾಗ ನೀಡಲು ಭಾರತ ಒಪ್ಪಿಗೆ ನೀಡಿದೆ. ಅಣುವಿದ್ಯುತ್ ಸ್ಥಾವರದ ಮೊದಲ ಎರಡು ಘಟಕಗಳು ಸಂಪೂರ್ಣ ಸಾಮರ್ಥ್ಯದಲ್ಲಿ ಚಾಲನೆಯಲ್ಲಿವೆ. ಮೂರು ಮತ್ತು ನಾಲ್ಕನೇ ಸ್ಥಾವರಗಳನ್ನು ನಿರ್ಮಿಸಲಾಗುತ್ತಿದೆ. 5 ಮತ್ತು 6ನೇ ಘಟಕಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಮುಂದಿನ 20 ವರ್ಷಗಳಲ್ಲಿ 12ಕ್ಕೂ ಹೆಚ್ಚು ಪರಮಾಣು ಕೇಂದ್ರಗಳನ್ನು ಸ್ಥಾಪನೆ ಮಾಡಲು ಯೋಜಿಸಲಾಗಿದೆ. ರಷ್ಯಾ ವಿನ್ಯಾಸಗೊಳಿಸಿರುವ 6 ಅಣುವಿದ್ಯುತ್ ಕೇಂದ್ರಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲು ಎರಡು ರಾಷ್ಟ್ರಗಳು ಉದ್ದೇಶಿಸಿವೆ. 3ನೇ ವಿಶ್ವ ರಾಷ್ಟ್ರಗಳೊಂದಿಗೆ ಪರಮಾಣು ಸಹಯೋಗ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಪುಟಿನ್ ಅವರು ತಿಳಿಸಿದ್ದಾರೆ.
ಇನ್ವೆಸ್ಟ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಸ್ಪೀಡ್ ರೈಲು ಯೋಜನೆ ಹಾಗೂ ರೈಲ್ವೆ ವಿಶ್ವವಿದ್ಯಾಲಯದ ಶಿಕ್ಷಣದಲ್ಲಿ ರಷ್ಯಾ ನೆರವಿಗೆ ಮುಂದಾಗಿದೆ. ಇನ್ನೊಂದು ಮಹತ್ವದ ಬೆಳವಣಿಕೆಯಲ್ಲಿ ದೇಶದ ರಸ್ತೆ ಸಾರಿಗೆ ಹಾಗೂ ಜಲಸಾರಿಗೆ ಬೆಳವಣಿಗೆಯಲ್ಲಿ ದೇಶದ ರಸ್ತೆ ಸಾರಿಗೆ ಹಾಗೂ ಜಲಸಾರಿಗೆ ಅಭಿವೃದ್ಧಿಯಲ್ಲೂ ಬಂಡವಾಳ ಹೂಡಿಕೆಗೆ ರಷ್ಯಾ ಸಮ್ಮತಿ ನೀಡಿದೆ. ಇದೇ ವೇಳೆ ಅಮೆರಿಕಾದ ವಾಣಿಜ್ಯ ಸಮರ ಹಾಗೂ ಇರಾನ್ ಮೇಲೆ ನಿರ್ಬಂಧ ಕುರಿತು ಮೋದಿ-ಪುಟಿನ್ ಮಾತುಕತೆ ನಡೆಸಿದ್ದಾರೆ. ತೈಲ ಉತ್ಪಾದನೆ ಹೆಚ್ಚಳಕ್ಕೂ ರಷ್ಯಾ ಸಮ್ಮತಿಸಿದೆ.

About the author

ಕನ್ನಡ ಟುಡೆ

Leave a Comment