ರಾಷ್ಟ್ರ ಸುದ್ದಿ

ನಕಲಿ ಆಧಾರ್ ಕಾರ್ಡ್ ಹೊಂದುವುದು ಅಸಾಧ್ಯ, ಆಧಾರ್ ಸುರಕ್ಷಿತವಾಗಿದೆ: ಎಂದ ಸುಪ್ರೀಂ ಕೋರ್ಟ್

ನವದೆಹಲಿ: ಆಧಾರ್ ಸುರಕ್ಷಿತವಾಗಿದ್ದು, ನಕಲಿ ಆಧಾರ್ ಹೊಂದುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಆಧಾರ್ ಸಿಂಧುತ್ವ ಕುರಿತು ಇಂದು ತನ್ನ ಅಂತಿಮ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ನಕಲಿ ಆಧಾರ್ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಬಗ್ಗೆ ತನ್ನ ಸುಮಾರು 40 ಪುಟಗಳ ತೀರ್ಪು ಓದಿರುವ ನ್ಯಾಯಮೂರ್ತಿ ಎಕೆ ಸಿಕ್ರಿ ಅವರು, ಆಧಾರ್ ನಕಲಿ ಸೃಷ್ಠಿ ಮಾಡಲು ಅವಕಾಶ ಇದ್ದರೆ ಅದನ್ನು ತಡೆಗಟ್ಟಿ, ಆಧಾರ್ ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಆಧಾರ್ ನಲ್ಲಿ ಪ್ರಸ್ತುತ ಇರುವ ಸುರಕ್ಷತಾ ಮಾನದಂಡ ಸಮಾಧಾನಕರವಾಗಿದ್ದು, ಸಾಧ್ಯವಾದಷ್ಟೂ ಬೇಗ ಆಧಾರ್ ಮಾಹಿತಿಗೆ ಕನ್ನ ಹಾಕಲು ಸಾಧ್ಯವಾಗದ ಹಾಗೆ ಅತ್ಯಾಧುನಿಕ ಸುರಕ್ಷತಾ ಮಾರ್ಗಗಳ ಅನುಸರಿಸುವುದು ಒಳಿತು. ಆಧಾರ್ ದಾಖಲಾತಿಗಾಗಿ ಕೇವಲ ಕನಿಷ್ಠ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಆಧಾರ್ ದೇಶದ ಸಾಮಾನ್ಯ ನಾಗರಿಕರ ಗುರುತಾಗಿದೆ. ಆಧಾರ್‌ ಕಾರ್ಡ್‌ಗೂ ಗುರುತಿಗೂ ವ್ಯತ್ಯಾಸವಿದೆ. ಬಯೋಮೆಟ್ರಿಕ್‌ ಮಾಹಿತಿಯನ್ನು ಒಂದು ಬಾರಿ ಸಂಗ್ರಹ ಮಾಡಿದರೆ ಅದು ವ್ಯವಸ್ಥೆಯಲ್ಲೇ ಉಳಿಯಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಂತೆಯೇ ಆಧಾರ್ ಮಾಹಿತಿಯನ್ನು ಯಾವುದೇ ಸಂಸ್ಥೆ 6 ತಿಂಗಳಿಗೂ ಅಧಿಕ ಕಾಲ ಸಂಗ್ರಹಣೆ ಮಾಡಿ ಇಟ್ಟುಕೊಳ್ಳುವಂತಿಲ್ಲ. ಅಂತೆಯೇ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಅಕ್ರಮ ನುಸುಳುಕೋರರಿಗೆ ಆಧಾರ್ ನೀಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಅಂತೆಯೇ ದೇಶದ ಯಾವುದೇ ಮಗು ಕೂಡ ಆಧಾರ್ ಇಲ್ಲ ಎಂಬ ಕಾರಣಕ್ಕೆ ಸವಲತ್ತುಗಳಿಂದ ವಂಚಿತವಾಗಬಾರದೂ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

About the author

ಕನ್ನಡ ಟುಡೆ

Leave a Comment