ಸಿನಿ ಸಮಾಚಾರ

ನಟಿ ಲಕ್ಷ್ಮೀಗೆ ಡಾ.ರಾಜ್‌ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು: ಚಲನಚಿತ್ರ ರಂಗದಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಡಾ.ರಾಜ್‌ಕುಮಾರ್‌ ಪ್ರಶಸ್ತಿಗೆ ಹಿರಿಯ ನಟಿ ಲಕ್ಷ್ಮೀ ಅವರನ್ನು ಆಯ್ಕೆ ಮಾಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಚಲನಚಿತ್ರ ರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ಸಾಧಕರಿಗೆ ನೀಡುವ 2017ನೇ ಸಾಲಿನ ಪ್ರಶಸ್ತಿ ಪಟ್ಟಿಯನ್ನು ಸೋಮವಾರ ಪ್ರಕಟಿ ಸಿದ್ದು, ನಿರ್ದೇಶಕರ ಜೀವಮಾನದ ಸಾಧನೆಗೆ ನೀಡುವ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಎಸ್‌.ನಾರಾಯಣ್‌, ಕನ್ನಡ ಚಿತ್ರರಂಗದ ನಾನಾ ವಲಯಗಳಲ್ಲಿ ಅಪೂರ್ವ ಸಾಧನೆ ತೋರಿದ ಹಿರಿಯ ಚೇತನಗಳ ಜೀವಮಾನದ ಸಾಧನೆಗಾಗಿ ನೀಡುವ ಡಾ.ವಿಷ್ಣುವರ್ಧನ್‌ ಪ್ರಶಸ್ತಿಗೆ ನಿರ್ಮಾಪಕ ಜಿ.ಎಸ್‌.ಲಕ್ಷ್ಮೀಪತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಹಾಗೂ ಎರಡು ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿದೆ. ಹಿರಿಯ ಚಿತ್ರನಟ ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಛಾಯಾಗ್ರಾಹಕ ಬಿ.ಎಸ್‌.ಬಸವರಾಜು, ಹಿರಿಯ ನಟಿ ಹೇಮಾ ಚೌಧರಿ, ಸಂಕಲನಕಾರ ಸುರೇಶ್‌ ಅರಸ್‌, ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್‌ ಸದಸ್ಯರಾಗಿದ್ದರು.

ಸಮಿತಿ ಸದಸ್ಯರು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳು ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದರು. ಬಳಿಕ ಮುಖ್ಯಮಂತ್ರಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್‌.ಸುಬ್ರಹ್ಮಣ್ಯ, ಕಾರ್ಯದರ್ಶಿ ಎಸ್‌.ಸೆಲ್ವಕುಮಾರ್‌, ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಇತರರು ಉಪಸ್ಥಿತರಿದ್ದರು.

 

About the author

ಕನ್ನಡ ಟುಡೆ

Leave a Comment