ರಾಜ್ಯ ಸುದ್ದಿ

ನಡೆದಾಡುತ್ತಿದ್ದ ದೇವರು ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ

ತುಮಕೂರು: ಕಳೆದ 50ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಶತಾಯುಷಿ ಡಾ.ಸಿದ್ದಗಂಗಾಶ್ರೀಗಳು(112ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಲಿಂಗೈಕ್ಯರಾಗಿದ್ದಾರೆ.

ಅಸಂಖ್ಯಾತ ಭಕ್ತರು, ಲಕ್ಷಾಂತರ ಶಿಷ್ಯವೃಂದವನ್ನು ಹೊಂದಿದ್ದ ಡಾ.ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ಭಾನುವಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ತಡರಾತ್ರಿ ಸಿದ್ದಗಂಗಾಶ್ರೀಗಳ ಬಿಪಿ ಮತ್ತು ಉಸಿರಾಟದಲ್ಲಿ ತೀವ್ರ ವ್ಯತ್ಯಯವಾಗಿತ್ತು.

ಸಿದ್ದಗಂಗಾಶ್ರೀಗಳ ಆರೋಗ್ಯ ಗಂಭೀರವಾಗಿದ್ದು, ನಾವು ಎಲ್ಲಾ ರೀತಿಯಿಂದಲೂ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ ಅದು ಎಷ್ಟರ ಮಟ್ಟಿಗೆ ಫಲ ನೀಡುತ್ತೋ, ಇಲ್ಲವೋ ಗೊತ್ತಿಲ್ಲ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡದ ಡಾ.ಪರಮೇಶ್ವರ್ ಅವರು ಇಂದು ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.

ಸಿದ್ದಗಂಗಾಮಠಕ್ಕೆ ಪ್ರವೇಶ ನಿರ್ಬಂಧ: ಸಿದ್ದಗಂಗಾಶ್ರೀಗಳ ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ಸಿದ್ದಗಂಗಾಮಠಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಕೇವಲ ಆಪ್ತರಿಗಷ್ಟೇ ಮಠದೊಳಕ್ಕೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

 

About the author

ಕನ್ನಡ ಟುಡೆ

Leave a Comment