ಸುದ್ದಿ

ನಡೆದಾಡುವ ದೇವರ ಜನ್ಮದಿನ ಸಂಭ್ರಮ

ತುಮಕೂರು: “ನಡೆದಾಡುವ ದೇವರು’, ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ ಸ್ವಾಮೀಜಿ 110 ವಸಂತಗಳನ್ನು ಪೂರೈಸಿ 111 ನೇ ವರ್ಷಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಭಾನುವಾರ ನಗರದ ಎಲ್ಲಾ ಭಾಗಗಳಲ್ಲಿ ಸಂಭ್ರಮದಿಂದ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಅಧಿಕಾರಿಗಳು ಸೇರಿದಂತೆ ಲಕ್ಷಾಂತರ ಸಂಖ್ಯೆಯ ಭಕ್ತರು ಮಠಕ್ಕೆ ಆಗಮಿಸಿ, ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.

ಶ್ರೀಗಳಿಂದ ಶಿವಪೂಜೆ: ಸಿದ್ಧಗಂಗಾ ಶ್ರೀಗಳು ಈವರೆಗೆ ಬೆಳಗಿನ ಜಾವ 3 ಗಂಟೆಗೆ ಎದ್ದು 5 ಗಂಟೆಯೊಳಗೆ ಶಿವಪೂಜೆ ಮಾಡುತ್ತಿದ್ದರು. ಆದರೆ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 6.30ಕ್ಕೆ ಎದ್ದ ಶ್ರೀಗಳು, ನಂತರ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಶಿವಪೂಜೆಯಲ್ಲಿ ಭಾಗವಹಿಸಿ ಇಷ್ಠಲಿಂಗ ಪೂಜೆ ನೆರವೇರಿಸಿದರು.

ಈ ವೇಳೆ ಆನೆ ಲಕ್ಷ್ಮೀ, ಶ್ರೀಗಳಿಗೆ ಹೂವಿನ ಮಾಲೆ ಹಾಕುವ ಮೂಲಕ ಶುಭ ಕೋರಿತು. ಮಠದ ಆವರಣದಲ್ಲಿನ ಉತ್ಸವ ಮಂಟಪಕ್ಕೆ ಸುಮಂಗಲಿಯರ 111 ಕಲಶದ ಮೆರವಣಿಗೆಯೊಂದಿಗೆ ಬಂದ ಶ್ರೀಗಳು, ಬೆಳ್ಳಿ ಸಿಂಹಾಸನ ಅಲಂಕರಿಸಿದರು.

ಆನಂತರ ವಿವಿಧ ಮಠಗಳ ಶ್ರೀಗಳಿಂದ ಮಠದ ಆವರಣದಲ್ಲಿ ಸಾಮೂಹಿಕ ಪಾದಪೂಜೆ ನಡೆಯಿತು. ಸಿದ್ಧಗಂಗಾ ಮಠಾಧ್ಯಕ್ಷ, ಕಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗಸ್ವಾಮೀಜಿ ನೇತೃತ್ವದಲ್ಲಿ ಸಿದ್ಧಗಂಗೆಯ ಶಾಖಾ ಮಠದ ಸ್ವಾಮೀಜಿ, ವಿವಿಧ ಮಠಗಳ ಪೀಠಾಧ್ಯಕ್ಷರುಗಳು ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಿ, ನೀರಾಂಜನವೆತ್ತಿ  ಪುಷ್ಪವೃಷ್ಟಿಗೈದರು.

About the author

ಕನ್ನಡ ಟುಡೆ

Leave a Comment