ತಂತ್ರಜ್ಞಾನ

ನದಿ ಮೂಲ ಪತ್ತೆಗೆ ಮಂಗಳನ ಗರ್ಭಕ್ಕೆ ಕೈ ಹಾಕಲು ಮುಂದಾದ ನಾಸಾ

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ಎಷ್ಟೋ ವರ್ಷಗಳ ಹಿಂದೆ ಡೆಲ್ಟಾ ನದಿಯಿದ್ದ ಕುರುಹನ್ನು ನಾಸಾ ವಿಜ್ಞಾನಿಗಳು ‘ಮಾರ್ಸ್‌ ರೆಕೊನೈಸೆನ್ಸ್‌ ಆರ್ಬಿಟರ್‌’ ಕಳುಹಿಸಿದ ಚಿತ್ರದ ಮೂಲಕ ಪತ್ತೆ ಹಚ್ಚಿದ್ದರು. ಇದೀಗ ನದಿ ಮೂಲಕವನ್ನೇ ಹುಡುಕಲು ಮೂರು ಕಾಲಿನ ಮತ್ತು ಶಸ್ತ್ರ ಸಜ್ಜಿತ ಕೈ ಇರುವ ನೌಕೆಯೊಂದನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಮಂಗಳ ಗ್ರಹದಲ್ಲಿ ಹಿಂದೆ ಡೆಲ್ಟಾ ನದಿ ಮತ್ತು ಸುಮಾರು 250 ಮೀಟರ್‌ ಆಳದ ಸರೋವರವಿತ್ತು ಎಂದು ಗುರುತಿಸಿಲ್ಪಟ್ಟಿರುವ ಜೆಜೆರೊ ಕ್ರೆಟರ್‌ ಎಂಬ ಪ್ರದೇಶದಲ್ಲಿ ಸಂಶೋಧನೆ ನಡೆಸಲಿದೆ. ಇಲ್ಲಿರುವ ಮರಳು ಮತ್ತು ಮಣ್ಣಿನ ಮಾದರಿಯನ್ನು ನಾಸಾ ನೌಕೆ ಕೃತಕ ಕೈ ಮೂಲಕ ಸಂಗ್ರಹಿಸಿ, ಭೂಮಿಗೆ ಮರಳಿಸಲಿದೆ. ಆ ನೌಕೆಯ ಹೆಸರು ‘ಮಾರ್ಸ್‌ ರೋವರ್‌’. ಜುಲೈ 2020ಕ್ಕೆ ಮಂಗಳನ ಅಂಗಳಕ್ಕೆ ಕಳುಹಿಸಲು ಮಾರ್ಸ್‌ ರೋವರ್‌ ಅನ್ನು ಅಮೆರಿಕ ವಿಜ್ಞಾನಿಗಳು ಸಿದ್ಧಗೊಳಿಸುತ್ತಿದ್ದಾರೆ. ಈ ನೌಕೆ ಮಂಗಳ ಕಕ್ಷೆಗೆ 2021ರ ಫೆಬ್ರವರಿ ತಿಂಗಳಲ್ಲಿ ತಲುಪಬಹುದು ಎಂದೂ ಅಂದಾಜಿಸಲಾಗಿದೆ.

ಮಂಗಳ ಗ್ರಹದಲ್ಲಿ ಪ್ರಾಚೀನ ಯುಗದ ಜೀವನ ಬಗ್ಗೆ ಸಂಶೋಧನೆ ನಡೆಸಲು ಮಾರ್ಸ್‌ ರೋವರ್‌ ಉಪಗ್ರಹವನ್ನು ಕಳುಹಿಸುತ್ತಿರುವ ಬಗ್ಗೆ ನಾಸಾ ಏಜೆನ್ಸಿ ನವೆಂಬರ್‍‌ 19ರಂದೇ ಘೋಷಿಸಿದ್ದಾರೆ. ನದಿ ಮತ್ತು ಸರೋವರದ ಕುರುಹು ಪತ್ತೆಯಾಗಿರುವುದರಿಂದ ಅಲ್ಲಿ ಜೀವಿಗಳು ವಾಸವಿದ್ದವೇ? ವಾಸಯೋಗ್ಯವಾಗಿತ್ತೆ? ಎಂತಹ ಜೀವಿಗಳು ಬದುಕಿದ್ದವು? ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಭವಿಷ್ಯದಲ್ಲಿ ರೋವರ್‌ ಉತ್ತರಿಸಲಿದೆ. 2020ಕ್ಕೆ ಕಳುಹಿಸಲು ರೂಪಿಸಲಾಗುತ್ತಿರುವ ರೋವರ್‌, 2012ರಲ್ಲಿ ಉಡಾವಣೆ ಮಾಡಲಾದ ಕ್ಯುರಿಯಾಸಿಟಿ ರೋವರ್‌ನಂತೆಯೇ ಇರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ರೋವರ್‌ನಲ್ಲಿ ಮಂಗಳ ಗ್ರಹದಲ್ಲೇ ಇದ್ದುಕೊಂಡು ಮರಳು, ಕಲ್ಲು ಅಥವಾ ಖನಿಜಗಳ ಮಾದರಿಯ ಮೇಲೆ ಅಧ್ಯಯನ ನಡೆಸುವ ತಂತ್ರಜ್ಞಾನವಿರಲಿದೆ. ಹಲವು ಅಧ್ಯಯನ, ಸಂಶೋಧನೆ ನಡೆಸುವ ಮೂಲಕ ವಿಸ್ತೃತ ವರದಿ ಮತ್ತು ಮಾದರಿಗಳೊಂದಿಗೆ 2030ಕ್ಕೆ ವಾಪಾಸಾಗಲಿದೆ ಎಂದು ಅಂದಾಜಿಸಲಾಗಿದೆ.

ರೋವರ್‌ ಅಲ್ಲೇನು ಮಾಡಲಿದೆ?
ತನ್ನ ಶಸ್ತ್ರ ಸಜ್ಜಿತ ಕೈಯಿಂದ ಸುಮಾರು 5 ಮೀಟರ್‌ ಆಳ ಕೊರೆದು ಮಾದರಿಯನ್ನು ಸಂಗ್ರಹಿಸಲಿದೆ. ಹಲವು ಸುತ್ತಿನ ಅಧ್ಯಯನ ನಡೆಸುತ್ತದೆ. ವಿಸ್ತೃತ ವರದಿ ಮತ್ತು ಮಾದರಿಗಳೊಂದಿಗೆ ಭೂಮಿಗೆ ಮರಳುತ್ತದೆ.

About the author

ಕನ್ನಡ ಟುಡೆ

Leave a Comment