ರಾಜ್ಯ ಸುದ್ದಿ

ನನಗೆ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಹೇಳಿಕೊಟ್ಟವರೇ ಬಿಜೆಪಿಯವರು: ಸಿಎಂ

ಬೆಂಗಳೂರು: ವಿವಾದಿತ ಬಿಎಂಐಸಿ ಯೋಜನೆ ಅಕ್ರಮಕ್ಕೆ ಸಂಬಂಧಿಸಿದಂತೆ ನೈಸ್‌ ಕಂಪನಿ ವಿರುದ್ಧ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ”ನೈಸ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ವರದಿ ಇನ್ನೂ ಅಂಗೀಕಾರವಾಗಿಲ್ಲ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಐದೂವರೆ ತಿಂಗಳಷ್ಟೇ ಕಳೆದಿದ್ದು, ಸ್ವಲ್ಪ ಸಮಯಾವಕಾಶ ಬೇಕು,” ಎಂದು ಸ್ಪಷ್ಟಪಡಿಸಿದರು.

ನೈಸ್‌ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದ ಕುಮಾರಸ್ವಾಮಿ ಅವರು ಸಿಎಂ ಆದ ಬಳಿಕ ಅಡ್ಜಸ್ಟ್‌ಮೆಂಟ್‌ ರಾಜಕಾರಣಕ್ಕೆ ಒಗ್ಗಿಕೊಂಡಿದ್ದಾರೆ ಎಂಬ ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ‘ಅಡ್ಜಸ್ಟ್‌ಮೆಂಟ್‌ ರಾಜಕಾರಣವನ್ನು ನನಗೆ ಹೇಳಿಕೊಟ್ಟವರೇ ಬಿಜೆಪಿಯವರು. ಹಿಂದೆ 2006ರಲ್ಲಿ ನೈಸ್‌ ಕಂಪನಿಯ ಯೋಜನೆಯನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದಾಗ ಅಂದಿನ ಮಿತ್ರಪಕ್ಷ ಬಿಜೆಪಿಯ ಸ್ನೇಹಿತರು ಸಚಿವ ಸಂಪುಟ ಸಭೆಯಿಂದಲೇ ಹೊರಗುಳಿದರು. ಇಂಥವರಿಂದ ನಾನು ಪಾಠ ಹೇಳಿಸಿಕೊಳ್ಳಬೇಕಿಲ್ಲ. ಅಡ್ಜಸ್ಟ್‌ಮೆಂಟ್‌ನ ಅಗತ್ಯ ನನಗಿಲ್ಲ,’ ಎಂದರು.

”ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳಲ್ಲೂ ನನ್ನ ನಿರ್ಧಾರ ಮತ್ತು ಕಾರ್ಯಕ್ರಮಗಳ ಮೂಲಕವೇ ಟೀಕಾಕಾರರಿಗೆ ಉತ್ತರ ಕೊಡುತ್ತಾ ಹೋಗುತ್ತೇನೆ. ಅದಕ್ಕಾಗಿ ಸ್ವಲ್ಪ ಸಮಯಾವಕಾಶ ಬೇಕು,” ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment