ರಾಜ್ಯ ಸುದ್ದಿ

ನನಗೆ ಎಷ್ಟು ವಯಸ್ಸಾಯ್ತು: ಕಿರಿಯ ಶ್ರೀಗಳ ಬಳಿ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಶ್ನೆ

ತುಮಕೂರು: ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಕೇಳಿದ ಒಂದು ಪ್ರಶ್ನೆಗೆ ಕಿರಿಯ ಸ್ವಾಮೀಜಿಗಳು ತಬ್ಬಿಬ್ಬಾದ ಘಟನೆ ನಡೆಯಿತು.
ಹೌದು.. ಪ್ರಸ್ತುತ ಅನಾರೋಗ್ಯಕ್ಕೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಸ್ವಾಮಿಜಿಗಳು ತಮ್ಮ ಕಿರಿಯ ಸ್ವಾಮಿಗಳನ್ನು ತಮ್ಮ ವಯಸ್ಸಿನ ಕುರಿತು ಪ್ರಶ್ನೆ ಮಾಡಿದ್ದರು. ಗುರುವಾರ ಬೆಳಿಗ್ಗೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಭೇಟಿ ಮಾಡಿದರು. ಈ ವೇಳೆ ‘ಯಾವಾಗ ಬಂದ್ರಿ… ಪ್ರಸಾದ ಮಾಡಿ… ಆರಾಮಾಗಿದ್ದೀರಾ…’ ಎಂದು ಶ್ರೀಗಳು ಪರಮೇಶ್ವರ ಅವರನ್ನು ಕೇಳಿದ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಪರಮೇಶ್ವರ, ‘ಬುಧವಾರ ರಾತ್ರಿ ಜ್ವರ ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಆತಂಕವಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಎಂದಿನಂತೆಯೇ ನಮ್ಮನ್ನು ಸ್ವಾಮೀಜಿ ಮಾತನಾಡಿಸಿದರು’ ಎಂದು ಹೇಳಿದರು.
ಇದೇ ವೇಳೆ ಸ್ವಾಮಿಜಿಯವರ ಜೊತೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡ ಪರಮೇಶ್ವರ ಅವರು,  ‘ತಮಗೆ ಎಷ್ಟು ವಯಸ್ಸಾಯ್ತು ಎಂದು ತಿಳಿಯಲು ಕಿರಿಯ ಶ್ರೀಗಳಾದ ಡಾ.ಸಿದ್ಧಲಿಂಗ ಸ್ವಾಮೀಜಿ ಅವರ ಮುಖ ನೋಡಿ ಎಷ್ಟು ಆಯ್ತು ಅಂಥಾ ಕೇಳಿದ್ರು. ಕಿರಿಯ ಶ್ರೀಗಳು 111 ಎಂದು ಹೇಳಿದಾಗ ಬಹಳ ಆಯ್ತು, ಬಹಳ ಆಯ್ತು ಎಂದು ನುಡಿದರು’ ಎಂದು ತಮ್ಮ ಭೇಟಿ ಕ್ಷಣಗಳನ್ನು ವಿವರಿಸಿದರು. ಅಂತೆಯೇ ಸದ್ಯಕ್ಕೆ ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಕಾಗಿಲ್ಲ’ ಎಂದೂ ಸ್ಪಷ್ಪಪಡಿಸಿದರು

About the author

ಕನ್ನಡ ಟುಡೆ

Leave a Comment