ರಾಷ್ಟ್ರ ಸುದ್ದಿ

ನನ್ನನ್ನು ರಾಹುಲ್ ಎಂದು ಕರೆಯುವಿರಾ: ಕಾಲೇಜು ವಿದ್ಯಾರ್ಥಿನಿಗೆ ರಾಹುಲ್ ಗಾಂಧಿ ಕೋರಿಕೆ

ಚೆನ್ನೈ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಈಗಾಗಲೇ ಧುಮುಕಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೆನ್ನೈಯ ಸ್ಟೆಲ್ಲಾ ಮ್ಯಾರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಸಂವಾದದ ಮಧ್ಯೆ ರಾಹುಲ್ ಗಾಂಧಿ ಬಳಿ ಪ್ರಶ್ನೆ ಕೇಳಲು ಎದ್ದು ನಿಂತ ಅಜ್ರಾ ಎಂಬ ವಿದ್ಯಾರ್ಥಿನಿಯೊಬ್ಬಳು ರಾಹುಲ್ ಸರ್ ಎಂದು ಸಂಬೋಧಿಸಿ ಪ್ರಶ್ನೆ ಕೇಳಲು ಆರಂಭಿಸಿದಳು. ಆಗ ತಕ್ಷಣವೇ ರಾಹುಲ್ ಗಾಂಧಿ ನನ್ನನ್ನು ಸರ್ ಎಂದು ಸಂಬೋಧಿಸುವ ಬದಲು ರಾಹುಲ್ ಎಂದು ಕರೆಯಿರಿ, ಅದು ನನಗೆ ಕೇಳಲು ಹಿತವಾಗಿರುತ್ತದೆ ಎಂದಾಗ ವಿದ್ಯಾರ್ಥಿನಿ ನಾಚಿ ನೀರಾದಳು. ಪ್ರೇಕ್ಷಕರಿಂದ ಕರತಾಡನದೊಂದಿಗೆ ಹೋ ಎಂಬ ಉದ್ಘಾರ ಕೇಳಿಬಂತು.

ಈ ಮೂಲಕ ಯುವ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ರಾಹುಲ್ ಗಾಂಧಿ ಯುವಕರಂತೆ ಹತ್ತಿರವಾಗಲು ಪ್ರಯತ್ನಿಸಿದರು. ರಾಜಕಾರಣಿಯಂತೆ ದಿನನಿತ್ಯದ ಬಿಳಿ ಕುರ್ತಾ ಪೈಜಾಮಾದಲ್ಲಿ ಬರದೆ ಕಾಲೇಜು ಸಂವಾದ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಬೂದು ಬಣ್ಣದ ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿ ಬಂದಿದ್ದರು. ನಂತರ ವಿದ್ಯಾರ್ಥಿನಿ ಅಜ್ರಾ ತುಂಬಾ ನಾಚಿಕೆಯಿಂದಲೇ ರಾಹುಲ್ ಎಂದು ಸಂಬೋಧಿಸಿ ತನ್ನ ಪ್ರಶ್ನೆಯನ್ನು ಕೇಳಿದಳು. ಆಗ ಮತ್ತೆ ಸಭಿಕರಿಂದ ಹೋ ಎಂಬ ಉದ್ಘಾರ ಬಂದಿತು. ಅಷ್ಟಕ್ಕೂ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಏನಾಗಿತ್ತೆಂದರೆ, ನಾನು ಫೈನ್ ಆರ್ಟ್ಸ್ ವಿದ್ಯಾರ್ಥಿನಿಯಾಗಿದ್ದು ಮೂಲಭೂತ ಸಂಶೋಧನೆಗಳ ಟಾಟಾ ಇನ್ಸ್ಟಿಟ್ಯೂಟ್ ಗೆ ಭಾರೀ ಹಣದ ಕೊರತೆ ಎದುರಾಗಿದ್ದು ಅದಕ್ಕೆ ಏನು ಮಾಡಬಹುದು ಎಂದು. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಭಾರತದಲ್ಲಿ ಶಿಕ್ಷಣಕ್ಕೆ ಅತ್ಯಂತ ಕಡಿಮೆ ಖರ್ಚು ಮಾಡುತ್ತೇವೆ. ಅದನ್ನು ಶೇಕಡಾ 6ಕ್ಕೆ ಹೆಚ್ಚಿಸಬೇಕು. ಶಿಕ್ಷಣಕ್ಕೆ ಖರ್ಚು ಮಾಡುವುದು ಎಂದರೆ ಶಿಕ್ಷಣದಲ್ಲಿ ಸ್ವತಂತ್ರತೆ ಬರಬೇಕು. ನಮಗೆ ಸ್ಪರ್ಧೆಯೊಡ್ಡುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳು ಇರಬೇಕು ಎಂದರು.

About the author

ಕನ್ನಡ ಟುಡೆ

Leave a Comment