ರಾಜ್ಯ ಸುದ್ದಿ

ನನ್ನ ಮಗನ ಮೇಲಾಣೆ ರೈತರ ಸಾಲಮನ್ನಾ ಮಾಡುತ್ತೇನೆ: ಸಿಎಂ ಕುಮಾರಸ್ವಾಮಿ

ಬಾಗಲಕೋಟೆ: ನನ್ನ ಮೇಲೆ ಯಾವುದೇ ರೀತಿಯ ಅನುಮಾನ ಪಡಬೇಡಿ. ಅಪನಂಬಿಕೆಯನ್ನೂ ಇಡಬೇಡಿ. ಇರುವ ಒಬ್ಬ ಮಗನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ರೈತರ ಸಾಲ ಮನ್ನಾ ಮಾಡುತ್ತೇನೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ.
ನಗರದ ಕಲಾಭವನದಲ್ಲಿ ನಿನ್ನೆ ಜಿಲ್ಲಾಡಳಿತ, ಸಹಕಾರ ಇಲಾಖೆ, ಬಿಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಣೆ ಮಾಡಿದ ಬಳಿಕ ಕುಮಾರಸ್ವಾಮಿಯವರು ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ. ರೈತರ ಸಾಲ ಮನ್ನಾ ಯೋಜನೆಯನ್ನು ಸಂಪೂರ್ಣಗೊಳಿಸಿಯೇ ತೀರುತ್ತೇನೆ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಸರ್ಕಾರವನ್ನು ಉಳಿಸಿಕೊಳ್ಳುತ್ತೇನೆ. ಭಯ ಬೇಡ. ಸಾಲಮನ್ನಾ ಮಾಡುವ ಸಲುವಾಗಿಯೇ ಮುಂದಿನ ಬಜೆಟ್ ನಲ್ಲಿ ರೂ.20 ಸಾವಿರ ಕೋಟಿ ಮೀಸಲಿಡುತ್ತೇವೆಂದು ಹೇಳಿದ್ದಾರೆ.
ನಾಲ್ಕು ಹಂತದಲ್ಲಿ ಸಾಲ ಮನ್ನಾ ಯೋಜನೆ ಪೂರ್ಣಗೊಳಿಸುವ ಇಚ್ಛಾಶಕ್ತಿ ನನ್ನದಾಗಿದ್ದು, ಬರುವ ಬಜೆಟ್ ನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮರುಪಾವತಿಗಾಗಿಯೇ ರೂ.20 ಸಾವಿರ ಕೋಟಿ ಹಣವನ್ನು ಕಾಯ್ದಿರಿಸುತ್ತೇನೆ. ಇದು ರೈತರಿಗೆ ನಾನು ಕೊಡುವ ವಾಗ್ದಾನ ಎಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಬಜೆಟ್ ಮಂಡಿಸುವ ಅಗತ್ಯವಿರುವುದರಿಂದ ಫೆಬ್ರವರಿ ತಿಂಗಳಿನಲ್ಲಿಯೇ ಬಜೆಟ್ ಮಂಡನೆ ಮಾಡುತ್ತೇನೆ. ಬರುವ ಮಾರ್ಚ್ 31ರೊಳಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪಡೆದ ರೈತರ ರೂ.2 ಲಕ್ಷ ಒಳಗಿನ ಸಾಲದಲ್ಲಿ ಕನಿಷ್ಠ ರೂ.50 ಸಾವಿರ ಹಣವನ್ನು ಅವರ ಅಕೌಂಟ್’ಗೆ ಹಣವನ್ನು ಬಡ್ಡಿ ಸಮೇತ ಸರ್ಕಾರ ಜಮಾ ಮಾಡುತ್ತದೆ. ಇನ್ನುಳಿದ ಸಾಲದ ಹಣ ಮತ್ತು ಬಡ್ಡಿಯನ್ನು ಬರುವ ಅವಧಿಯಲ್ಲಿ ಸರ್ಕಾರವೇ ಪಾವತಿಸುತ್ತದೆ. ಈ ಕುರಿತು ಪ್ರತಿ ರೈತನಿಗೆ ಮಾಹಿತಿಯನ್ನು ಮನೆ ಬಾಗಿಲಿಗೆ ತಲುಪಿಸುವ ಹೊಣೆ ಸರ್ಕಾರದ್ದು ಎಂದು ಭರವಸೆ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment