ಸಿನಿ ಸಮಾಚಾರ

ನನ್ನ ಮತ್ತು ಕಾಜೋಲ್‌ ಬಗ್ಗೆ ಮಾತನಾಡಿ, ಆದರೆ ನನ್ನ ಮಕ್ಕಳ ಬಗ್ಗೆ ಅಲ್ಲ: ಟ್ರೋಲಿಗರ ವಿರುದ್ಧ ಅಜಯ್‌ ದೇವಗನ್‌ ಕಿಡಿ

ಮುಂಬೈ: ಬಾಲಿವುಡ್‌ ನಟ ಅಜಯ್‌ ದೇವಗನ್‌ ಟ್ರೋಲಿಗರ ವಿರುದ್ಧ ಕಿಡಿಕಾರಿದ್ದು, ತನ್ನ 15 ವರ್ಷದ ಮಗಳು ನ್ಯಾಸ ಮತ್ತು 8 ವರ್ಷದ ಪುತ್ರ ಯುಗ್‌ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಟೋಟಲ್ ಧಮಾಲ್ ಚಿತ್ರದ ಪ್ರಚಾರದ ವೇಳೆ ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದ ಬಳಕೆದಾರರು ನಮ್ಮ ಮಕ್ಕಳ ಬಗ್ಗೆ ಯಾವುದೇ ನಿರ್ಣಯವನ್ನು ಮಾಡಬೇಡಿ. ನೀವು ಬೇಕಾದರೆ ನನ್ನ ಮತ್ತು ಕಾಜೋಲ್‌ ಬಗ್ಗೆ ಮಾತನಾಡಿ. ಆದರೆ ನಮ್ಮ ಮಕ್ಕಳನ್ನು ಇದಕ್ಕೆ ಬಳಸಿಕೊಳ್ಳಬೇಡಿ. ಯಾಕೆಂದರೆ ನಾವಿಬ್ಬರು ಕಲಾವಿದರಾಗಿದ್ದೇವೆ. ಹಾಗಾಗಿ ಪ್ರತಿ ಬಾರಿಯೂ ನಮ್ಮ ಮಕ್ಕಳು ಇದಕ್ಕೆ ಗುರಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ನ್ಯಾಸಾ ಧರಿಸಿದ ಉಡುಪಿನ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದದ್ದಕ್ಕೆ ಪ್ರತಿಕ್ರಿಯಿಸಿರುವ ಅಜಯ್‌, ಯಾರೊಬ್ಬರ ಬಗ್ಗೆಯೂ ನಿರ್ಣಯ ಮಾಡುವುದು ಉತ್ತಮವಾದದ್ದಲ್ಲ. ಅಕಸ್ಮಾತ್‌ ನಾನೂ ಕೂಡ ಒಬ್ಬರ ಬಗ್ಗೆ ಜಡ್ಜ್‌ಮೆಂಟ್ ನೀಡಿದ್ದೇ ಆದರೆ ಅದು ಆ ವ್ಯಕ್ತಿಗೆ ನೋವುಂಟು ಮಾಡುತ್ತದೆ. ಹಾಗಾಗಿ ನನ್ನ ಮಕ್ಕಳ ಬಗ್ಗೆಯೂ ಮಾತನಾಡಬೇಡಿ. ನಿಜವಾಗಿ ಹೇಳುತ್ತಿದ್ದೇನೆ, ಟ್ರೋಲ್‌ ಮಾಡುವವರು ನನಗೆ ಮುಖ್ಯವಲ್ಲ. ಆದರೆ ನನ್ನ ಮಕ್ಕಳು ಕಠಿಣ ಟ್ರೋಲ್‌ಗೆ ಒಳಗಾದಾಗ ಕೆಲವೇಳೆ ನನಗೆ ನೋವಾಗುತ್ತದೆ ಎಂದಿದ್ದಾರೆ.

ಟ್ರೋಲ್‌ಗಳನ್ನು ನ್ಯಾಸ ಹೇಗೆ ತೆಗೆದುಕೊಳ್ಳುತ್ತಾಳೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ಆರಂಭದಲ್ಲಿ ನನ್ನ ಮಗಳು ಬೇಸರಪಡುತ್ತಿದ್ದಳು. ಆದರೆ ಈಗ ಆಕೆ ಇಂತಹ ಟ್ರೋಲ್‍ಗಳಿಗೆ ಕೇರ್‌ ಮಾಡುತ್ತಿಲ್ಲ. ಇದನ್ನೆಲ್ಲ ಹೇಗೆ ನಿಭಾಯಿಸಬೇಕು ಎನ್ನುವುದನ್ನು ನನ್ನ ಮಗಳು ತಿಳಿದುಕೊಂಡಿದ್ದಾಳೆ. ಕೆಲವರು ಏನೂ ವಿಷಯವೇ ಇಲ್ಲದಿದ್ದರೂ ಕೂಡ ನಮ್ಮನ್ನು ಜಡ್ಜ್‌ ಮಾಡಲು ಕಾಯುತ್ತಿರುತ್ತಾರೆ ಎನ್ನುವುದನ್ನು ಅವಳು ಅರ್ಥ ಮಾಡಿಕೊಂಡಿದ್ದಾಳೆ. ಟ್ರೋಲ್‌ಗಳಿಗೆ ಪ್ರತಿಕ್ರಿಯೆ ನೀಡಿದರೆ ಅವರು ಇನ್ನಷ್ಟು ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ಅವುಗಳ ಕಡೆಗೆ ಗಮನ ಕೊಡಬಾರದು ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment