ಸಿನಿ ಸಮಾಚಾರ

ನಮ್ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ರೆ ರಕ್ತ ಕುದಿಯುತ್ತೆ: ಯಶ್

ಮಂಡ್ಯ: ನಮಗೆ ಎಲ್ಲರ ಮೇಲೂ ಗೌರವವಿದೆ. ಆದರೆ ನಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರೆ ರಕ್ತ ಕುದಿಯುತ್ತದೆ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಮಂಗಳವಾರ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.

ಇಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಸ್ವಾಭಿಮಾನಿ ಸಮ್ಮಿಲನ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ ಯಶ್, ನಾನು ಪಂಚಿಂಗ್ ಡೈಲಾಗ್ ಹೊಡೆಯುವದಿಲ್ಲ. ಅಂದಿನಿಂದಲೂ ಎಲ್ಲರೂ ತಾಳ್ಮೆಯಿಂದ ಇರೋಣ ಎಂದು ಹೇಳುತ್ತಿದ್ದರು. ಅದೇ ರೀತಿ ಪ್ರಚಾರ ಮಾಡಿದ್ದೇವೆ. ಆದರೆ ನಮ್ಮ ರಕ್ತ ಕೇಳಲ್ವೇ, ಸ್ವಲ್ಪ ಕುದಿಯುತ್ತಿತ್ತು. ನಮಗೆ ಎಲ್ಲರ ಮೇಲೂ ಗೌರವವಿದೆ. ಆದರೆ ನಮ್ಮ ಮನೆ ಹೆಣ್ಣು ಮಗಳ ಮೇಲೆ ಮಾತನಾಡಿದ್ರೆ, ಅವರು ಯಾರು ಅಂತನೂ ನೋಡಲ್ಲ, ಯಾವ ಸ್ಥಾನದಲ್ಲಿದ್ದರು, ಎಷ್ಟೇ ಶಕ್ತಿಶಾಲಿ ಆಗಿದ್ರೂ ನೋಡಲ್ಲ. ಅದನ್ನು ನೋಡಿಕೊಂಡು ಕುಳಿತುಕೊಂಡರೆ ನಾವು ಮನುಷ್ಯರಾಗಲ್ಲ ಎಂದರು.

ಈ ಚುನಾವಣೆ ಸ್ವಾಭಿಮಾನದ ಚುನಾವಣೆ ಎಂದು ಹೇಳುತ್ತಿದ್ದಾರೆ. ಆದರೆ ಕೆಲವರು ಸ್ವಾಭಿಮಾನವನ್ನು ಲೇವಡಿ ಮಾಡುತ್ತಿದ್ದಾರೆ. ಸ್ವಾಭಿಮಾನ ಇರುವವರೇ ಇಂದು ಇಲ್ಲಿಗೆ ಬಂದು ನಿಂತಿದ್ದಾರೆ. 500 ರೂ. ಮೊಬೈಲ್ ಆಫರ್ ಕೊಟ್ಟವರು ಇಂದು ಇಲ್ಲಿಗೆ ಬಂದಿಲ್ಲ. ಆಫರ್ ಕೊಟ್ಟರೆ ಬಿಸಿಲಿದೆ ಟೋಪಿ ಕೊಡಿ, ಕುಡಿಯಲು ನೀರು ಕೊಡಿ ಹಾಗೂ ಮೊದಲು ನಮ್ಮ ಹಣ ಕೊಡಿ ಎಂದು ಕೇಳುತ್ತಾರೆ. ಆದರೆ ಇಂದು ಜನರು ಬೆವರು ಸುರಿಸಿ ದುಡಿದಿದ್ದ ಹಣವನ್ನು ಅಕ್ಕ ಅವರಿಗೆ ತಂದು ಕೊಡುತ್ತಿದ್ದರು. ಅದರಲ್ಲಿ ಅವರ ಬೆವರಿದೆ. ದುಡ್ಡು ಇರೋರಿಗೆ ಸ್ವಾಭಿಮಾನ ಎಂದರೇನು ಅಂತಾ ತೋರಿಸಿ. ಯಾರು ಏನೇ ಹೇಳಿದರೂ ಈ ಅಭಿಮಾನ ಸುಳ್ಳು ಎಂದರೆ ನಾನು ಒಪ್ಪಲ್ಲ ಎಂದರು.

ಜನ ಸೇರುತ್ತಿರುವುದು ನಟರನ್ನು ನೋಡೋಕೆ ಅಂತಾರೆ. 10 ದಿನದಿಂದ ನಾವಿಲ್ಲಿ ಓಡಾಡುತ್ತಲೇ ಇದ್ದೀವಿ. ಹಾಗಾದ್ರೆ ಇವತ್ತು ಯಾಕಪ್ಪ ಇಷ್ಟು ಜನ ಬಂದಿದ್ದೀರಿ? ನೋಡೋಕೆ ಬರ್ತಾರಂತೆ, ಓಟ್ ಹಾಕಲ್ವಂತೆ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ರಾಕಿಂಗ್ ಸ್ಟಾರ್ ಟಾಂಗ್ ನೀಡಿದರು. ನಮ್ಮನ್ನು ವಿರೋಧಿಸಲು ಅವರ ಬಳಿ ಯಾವುದೇ ಪಾಯಿಂಟ್ಸ್ ಇಲ್ಲ. ಹೀಗಾಗಿ ಸಿನಿಮಾದವರನ್ನು ನಂಬಬೇಡಿ ಅಂತಾರೆ. ಇನ್ನೊಂದೆಡೆ ನಾನು ಸಹ ಸಿನಿಮಾ ನಿರ್ಮಾಪಕ ಅಂತ ಹೇಳುತ್ತಾರೆ ಎನ್ನುವ ಮೂಲಕ ಯಶ್ ಕುಮಾರಸ್ವಾಮಿ ಅವರ ಕಾಲೆಳೆದರು

About the author

ಕನ್ನಡ ಟುಡೆ

Leave a Comment