ಅಂಕಣಗಳು

ನಮ್ಮ ಮಾತೃ ಭಾಷೆ ಬಗ್ಗೆ ಹೆಮ್ಮೆ ಪಡೋಣ

ಹೆತ್ತ ತಾಯಿ ತರಹನೆ ನಮ್ಮ ಭಾಷೆ ಸಹ . ತಂದೆ ತಾಯಿ ಇದ್ದಾಗ ಅವರನ್ನು ಕನಿಷ್ಠವಾಗಿ ಕೆಲವರು ಕಾಣುತ್ತಾರೆ. ಇನ್ನೂ ಕೆಲವರು ಇದ್ದರೂ ಇಲ್ಲದಂತೆ ತೋರಿಸಿಕೊಳ್ಳುತ್ತಾರೆ.  ಹೆತ್ತವರು ಇಲ್ಲ ಅಂದಾಗ ನಾವು “ಅನಾಥರ” ಗುಂಪಿಗೆ ಸೇರುತ್ತೇವೆ ಎಂಬುದು ಕೆಲವರು ಮರೆತುಬಿಡುತ್ತಾರೆ.
ನೆನ್ನೆ ಸಂಜೆ ಕುಕ್ಕರ್ ರೆಡೀ ಮಾಡಿಸ್ಬೇಕಿತ್ತು, ಹಾಗೆ ಸ್ವಲ್ಪ ಸಣ್ಣ ಪುಟ್ಟ ಮನೆಯ ಕೆಲಸಗಳಿದ್ದವು.  ಮುಗಿಸಿಕೊಂಡು ಬರೋಣವೆಂದು ಮಾರುಕಟ್ಟೆಗೆ ಮಗಳೊಂದಿಗೆ  ಹೊರಟೆ.  ಎಲೆಕ್ಟ್ರಿಕಲ್ಸ್  ಅಂಗಡಿಯ ಬಳಿ ಹೋದೆವು. ಅಲ್ಲಿಯೇ ಕುಕ್ಕರ್ ಗೆ ಹಿಡಿಕೆ ಹಾಕಿಸಲು ಕೊಟ್ಟೆ ” ಎಷ್ಟು ಹೊತ್ತಾಗುತ್ತದೆ ತಮ್ಮಾ” ಎಂದೆ.  ೧೦ ನಿಮಿಷ ಮೇಡಮ್ ಎಂದರು.   ಆತ ರೆಡಿ ಮಾಡುತ್ತಿದ್ದರು . ಅಷ್ಟರಲ್ಲಿ ಅಂಗಡಿಗೆ ಒಬ್ಬ ವ್ಯಕ್ತಿ ಬಂದರು “ಹೇ ಬಾಯ್ ಓ ಮಿಕ್ಸೀ ಜಾರ್ ಕೋ ನೀಚೇ ಡಾಲ್ತೇಹೈ ನಾ ..? ವೋ ದೋ ” ಎಂದರು. ಅಂಗಡಿಯವ
” ಬುಷ್ ಬೇಕಾ? ” ಎಂದರು.  ಈತ ” ಆ ವೋ ಬುಷ್ ದೊ ” ಎಂದರು.   ” ಐವತ್ತು ರೂಪಾಯಿ ಆಗುತ್ತದೆ” ಅಂದರು. ” ಪರ್ವಾನಹೀ ದೇದೋ ” ಅಂದ .  ವ್ಯಕ್ತಿಯ ಹಿಂದಿನಿಂದ ” ಏನು ” ಮೆಲುಧ್ವನಿ ಕೇಳಿತು.   ಆಗ ನನ್ನ ಕಿವಿ ಚುರುಕಾಗಿ ತಕ್ಷಣ ಹಿಂದೆ ತಿರುಗಿ ನೋಡಿದೆ. ಆತನ ಪತ್ನಿ ಅನ್ನಿಸಿತು.   ಆಕೆ ಚಿಕ್ಕವಯಸ್ಸಿನವಳು.. ಇತ್ತೀಚೆಗೆ ಮದುವೆಯಾಗಿರುವಂತೆ,  ಗ್ರಾಮೀಣ ಪ್ರದೇಶದ ಮುಗ್ಧಳೆನ್ನಿಸಿತು .  ಬಹುಶಃ ಆಕೆಗೆ ಕನ್ನಡ ಬಿಟ್ಟು ಬೇರೆ ಭಾಷೆ ತಿಳಿಯದು.  ಗಂಡ ಆಕೆಯ ಮುಂದೆ ಹಿಂದಿ ಭಾಷೆ ಮಾತನಾಡಿ ‘ತನ್ನ ಪ್ರೌಢಿಮೆಯನ್ನು ‘ ತೋರಿಸುತ್ತಿದ್ದಾನೆ’ ಎನ್ನಿಸಿತು.  ನಾನು ಆತನನ್ನು ನೋಡಿದೆ ಆತನು ಹಿಂದಿ ಬರುವ ಜಂಭಗಾರನಂತೆ ಕಂಡ (ನನ್ನ ಸಿಟ್ಟಿಗೆ ಅಷ್ಟೇ  ) .  “ಜಲ್ದೀ ದೇ ಭಾಯ್” ಅಂದ. “ಕೊಟ್ಟೆ ಒಂದು ನಿಮಿಷ” ಅಂಗಡಿಯವನೆಂದ.  “ಅವರು ಉತ್ತರ ಭಾರತದಿಂದ ಬಂದು ಕನ್ನಡ ಕಲಿತು  ಆಗಲಿಂದ ಕನ್ನಡದಲ್ಲಿ ಅಷ್ಟು ಚೆನ್ನಾಗಿ ಮಾತನಾಡುತ್ತಿರುವುದು ನಿಮಗೆ ಕೇಳಿಸುತ್ತಿದೆ ತಾನೇ?” ಎಂದೆ ನಮ್ರತೆಯಿಂದ .  ನನ್ನ ಮಾತು ಕೇಳಿಸದವನಂತೆ ಇದ್ದ .  ಅಂಗಡಿಯವನು ನಕ್ಕ ” ಮೇಡಮ್ ಕೆಲವರು ಹೀಗೆಯೇ ” ಅಂದ.  ಹೆಂಡತಿಗೆ ಬೇಸರವಾಗಬಾರದು ಎಂದು ನಾನು ಅಂಗಡಿಯವನಿಗೆ ಅಂದೆ “ಉಸ್ಕೀ ಬೀವೀ ಸಾಥ್ ಮೆ ಹೈ ನಾ ವಹ್ ಶಾಯದ್ ಹಿಂದಿ ನಹೀ ಜಾನತೀ  ಇಸೀಲಿಯೇ ಸ್ಕೋಪ್ ದಿಖಾರಹಾ ಹೈ ” ಎಂದು ಹೇಳಿದೆ. ಇಬ್ಬರೂ ಜೋರಾಗಿ ನಕ್ಕೆವು.   ” ಸ್ವಲ್ಪ ಬೇಗ ಕೊಡಪ್ಪಾ ..ಟೈಂ ಆಯಿತು” ಅಂತ ಆಗ ಕನ್ನಡ ನೆನಪಾಗಿ ಸ್ವರ ಹೊರಟಿತು ವ್ಯಕ್ತಿಯಲ್ಲಿ .  ” ಕುಕ್ಕರ್ ಕೆಲಸ ನಂತರ ಮಾಡು ಅವರಿಗೆ ಬುಷ್ ಕೊಟ್ಟು ಕಳಿಸು ” ಎಂದ.
ಹೀಗೆ ನಮ್ಮ ಕನ್ನಡದ ಕೆಲವು ಜನ ಯಾರ ಹತ್ತಿರ ಯಾವ ಮರ್ಯಾದೆಯನ್ನು ಕಾಪಾಡಿಕೊಂಡು ಹೋಗಬೇಕೆಂದು ತಿಳಿದುಕೊಳ್ಳಲು ಅಸಮರ್ಥರಾಗಿದ್ದೇವೆ.   ಮನೆಯವರ ಹತ್ತಿರ ಏನು ಸ್ಕೋಪ್.   ಹೊರಗಿನಿಂದ ಬಂದವರ ಬಳಿ ಕನ್ನಡವನ್ನು ಬಿಟ್ಟು ಕೊಡದೆ ಕನ್ನಡದ ಘನತೆ ಕಾಪಾಡಿಕೊಂಡು ಹೋಗುವುದನ್ನು ನಾವು ಎಲ್ಲರೂ ಕಲಿಯಬೇಕಿದೆ.

 

– ವಿಶಾಲಾ ಆರಾಧ್ಯ

 

About the author

Pradeep Kumar T R

Leave a Comment