ರಾಜ್ಯ ಸುದ್ದಿ

ನಮ್ಮ ಮೆಟ್ರೊ’ಗೆ 3 ಕೋಟಿ ರೂ. ಮೌಲ್ಯದ ಜಮೀನನ್ನು ದಾನ ಮಾಡಿದ ಮುನ್ನಿ ರೆಡ್ಡಿ ಕುಟುಂಬ!

ಬೆಂಗಳೂರು: ಇಳಿ ವಯಸ್ಸಿನಲ್ಲಿ ಮಕ್ಕಳಿಗೆ ಎಷ್ಟು ಸಂಪತ್ತು ಮಾಡಿಕೊಟ್ಟಿದ್ದೇವೆ ಎಂದು ತಿಳಿಯುವವರೇ ಬಹುತೇಕ ಮಂದಿ. ಅಂತಹದ್ದರಲ್ಲಿ 84ರ ಇಳಿವಯಸ್ಸಿನ ವೃದ್ಧರೊಬ್ಬರು ಹೊಸೂರು ಮುಖ್ಯ ರಸ್ತೆಯಲ್ಲಿರುವ ತಮ್ಮ ಭೂಮಿಯನ್ನು ನಮ್ಮ ಮೆಟ್ರೊ ರೈಲು ಯೋಜನೆಗೆ ದಾನ ಮಾಡಿದ್ದಾರೆ.84 ವರ್ಷದ ಮುನ್ನಿ ರೆಡ್ಡಿ ಮತ್ತು ಅವರ ನಾಲ್ವರು ಗಂಡು ಮಕ್ಕಳು ನಮ್ಮ ಮೆಟ್ರೊ ಯೋಜನೆಯ 2ನೇ ಹಂತದ ಕಾಮಗಾರಿಗೆ ಮಾರುಕಟ್ಟೆ ಮೌಲ್ಯ ಸುಮಾರು 3 ಕೋಟಿ ರೂಪಾಯಿಯ ಜಮೀನನ್ನು ನೀಡಿದ್ದಾರೆ.

ಬೊಮ್ಮನಹಳ್ಳಿ ಸಮೀಪ ಇದ್ದ 268 ಚದರಡಿ ಜಮೀನನ್ನು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ನೀಡಿದ್ದಾರೆ. 18.8 ಕಿಲೋ ಮೀಟರ್ ಉದ್ದದ ಆರ್ ವಿ ರಸ್ತೆ-ಬೊಮ್ಮನಹಳ್ಳಿ ರೈಲು ಹಳಿ ನಿರ್ಮಾಣಕ್ಕೆ ನೀಡಿದ್ದಾರೆ.ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರೆಡ್ಡಿಯವರ ಮೊಮ್ಮಗ ಆರ್ ಪ್ರಶಾಂತ್, ಮೆಟ್ರೊ ರೈಲಿನ ಎರಡನೇ ಹಂತದ ಕಾಮಗಾರಿಗೆ ನಿನ್ನ ಜಮೀನಿನ ಸ್ವಲ್ಪ ಭಾಗದ ಅವಶ್ಯಕತೆಯಿದೆ ಎಂದು ಕೇಳಿದರು. ನಗರದ ಅಭಿವೃದ್ಧಿಗೆ ಉಚಿತವಾಗಿ ನೀಡೋಣವೆಂದು ನಮ್ಮ ತಾತ ಹೇಳಿದರು. ಅದಕ್ಕೆ ನಾವೆಲ್ಲರೂ ಒಪ್ಪಿಕೊಂಡೆವು ಎನ್ನುತ್ತಾರೆ.ಮುನ್ನಿ ರೆಡ್ಡಿಯವರ ಪೂರ್ವಜರು ಕರ್ನಾಟಕದವರೇ. ಬಹಳ ಕೃಷಿ ಭೂಮಿಯನ್ನು ಕೂಡ ಹೊಂದಿದ್ದರು. ಅಲ್ಲದೆ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.

ಮುನ್ನಿ ರೆಡ್ಡಿ ಕುಟುಂಬದವರು ಜಮೀನನ್ನು ಮೆಟ್ರೊ ರೈಲು ಯೋಜನೆಗೆ ಉಚಿತವಾಗಿ ನೀಡಿರುವುದು ನಿಜಕ್ಕೂ ಆಶ್ಚರ್ಯಕರ. ಯಾವುದೇ ಪರಿಹಾರವನ್ನು ಕೂಡ ಅವರ ಕುಟುಂಬದವರು ಕೇಳಿಲ್ಲ. ಇದರಿಂದ ಮೆಟ್ರೊ ನಿಗಮಕ್ಕೆ ತುಂಬಾ ಉಪಕಾರವಾಗಿದೆ ಎಂದು ಬಿಎಂಆರ್ ಸಿಎಲ್ ನ ಜಮೀನು ಸ್ವಾಧೀನ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಎಂ ಎಸ್ ಚನ್ನಪ್ಪ ಗೌಡರ್ ಹೇಳಿದರು.

About the author

ಕನ್ನಡ ಟುಡೆ

Leave a Comment