ರಾಜ್ಯ ಸುದ್ದಿ

ನಮ್ಮ ಮೆಟ್ರೋ 2ನೇ ಹಂತ ಪೂರ್ಣಗೊಳ್ಳಲು ರೂ.32,000 ಕೋಟಿ ವೆಚ್ಚವಾಗಲಿದೆ: ಪರಮೇಶ್ವರ್

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತ ಪೂರ್ಣಗೊಳ್ಳಲು ರೂ.32 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಶುಕ್ರವಾರ ಹೇಳಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಮೆಟ್ರೋ 2ನೇ ಹಂತ 2020ರೊಳಗೆ ಮೈಸೂರು ರಸ್ತೆ, ತುಮಕೂರು ರಸ್ತೆ ಪೂರ್ಣಗೊಳ್ಳಲಿದೆ. ವೈಟ್ ಫೀಲ್ಡ್, ಆರ್’ವಿ ರಸ್ತೆ, ಬೊಮ್ಮಸಂದ್ರ ಮಾರ್ಗವು 2021ಕ್ಕೆ ಪೂರ್ಣಗೊಂಡರೆ, ಗೊಟ್ಟಿಗೆರೆ-ನಾಗವಾರ ಮಾರ್ಗ 2023ಕ್ಕೆ ಮುಗಿಯಲಿದೆ. ಈ ಹಂತಕ್ಕೆ ರೂ.26.405 ಕೋಟಿ ವೆಚ್ಚವಾಗಲಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳುವುದರೊಳಗೆ ರೂ.32 ಸಾವಿರ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ. ಬಿಎಂಆರ್’ಸಿಎಲ್, ಬಿಬಿಎಂಪಿ, ಬಿಎಂಆರ್’ಡಿಎ, ಬಿಡಬ್ಲ್ಯೂಎಸ್ಎಸ್’ಬಿ ಸೇರಿದಂತೆ ಎಲ್ಲಾ ಮೆಟ್ರೋ ಪಾಲಿಟಿನ್ ನಿಗಮಗಳ ಮಧೆಯ ಸಮನ್ವಯತೆ ಕಾಪಾಡಲು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ಬಿಎಂಆರ್’ಸಿಎಲ್ ನಿಂದ ತಿಂಗಳಿಗೆ ರೂ.30 ಕೋಟಿ ಆದಾಯ ಬರುತ್ತಿದೆ. ಅದರಲ್ಲಿ ರೂ.24 ಕೋಟಿ ವೆಚ್ಚವಾಗುತ್ತಿದೆ. ಭದ್ರತಾ ಸಿಬ್ಬಂದಿ, ಟಿಕೆಟ್ ವಿತರಕರು ಸೇರಿದಂತೆ ಅನಗತ್ಯ ಮಾನವ ಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಿ ತಿಂಗಳಲ್ಲಿ ಕನಿಷ್ಠ ರೂ.5 ಕೋಟಿ ವೆಚ್ಚ ಕಡಿಮೆ ಮಾಡಲು ಸೂಚಿಸಿದ್ದೇನೆಂದು ತಿಳಿಸಿದ್ದಾರೆ. ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ನಿರ್ಮಾಣ ಕುರಿತು 15 ದಿನಗಳೊಳಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಇದೇ ವೇಳೆ ಹೇಳಿದ್ದಾರೆ. ಇದೇ ವೇಳೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ನಡುವೆ ಸಂಚರಿಸಲು ಕಾಮನ್ ಫೇರ್ ಕಾರ್ಜ್ ಪರಿಚಯಿಸುವ ಕುರಿತಂತೆ ಮಾತನಾಡಿದ ಅವರು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

About the author

ಕನ್ನಡ ಟುಡೆ

Leave a Comment