ರಾಷ್ಟ್ರ ಸುದ್ದಿ

ನರೋಡಾ ಪಾಟಿಯಾ ಗಲಭೆ ಪ್ರಕರಣ ಮಾಯಾ ಕೊಡ್ನಾನಿ ಖುಲಾಸೆ

ಅಹಮದಾಬಾದ್: 16 ವರ್ಷಗಳ ಹಿಂದಿನ ಗೋಧ್ರೋತ್ತರ ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಚಿವೆ ಮಾಯಾಬೆನ್‌ ಕೊಡ್ನಾನಿ ಅವರನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ಖುಲಾಸೆಗೊಳಿಸಿದೆ.

ಬಜರಂಗದಳದ ನಾಯಕ ಬಾಬು ಬಜರಂಗಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ. ಆದರೆ, ಶಿಕ್ಷೆಯ ಪ್ರಮಾಣವನ್ನು 21 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಕೆ ಮಾಡಿದೆ. ಸಾಕ್ಷಿಗಳು ನೀಡಿದ ಹೇಳಿಕೆ ಸಮಂಜಸವಾಗಿಲ್ಲದ ಕಾರಣ ‘ಸಂಶಯದ ಲಾಭ’ ಆಧಾರದ ಮೇಲೆ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಹರ್ಷ ದೇವಾನಿ ಹಾಗೂ ಎ.ಎಸ್. ಸೂಫಿಯಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಹೇಳಿದೆ. ಕೊಡ್ನಾನಿ ಅವರನ್ನು ನರೋಡಾ ಪಾಟಿಯಾ ಗಲಭೆಯ ‘ಪ್ರಮುಖ ಸೂತ್ರಧಾರಿಣಿ’ ಎಂದು ಹೇಳಿದ್ದ ವಿಚಾರಣಾ ನ್ಯಾಯಾಲಯ, 28 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅವರು ಜಾಮೀನಿನ ಮೇಲೆ ಹೊರ ಬಂದಿದ್ದರು.

2002ರ ಫೆಬ್ರುವರಿ 28ರಂದು ಅ ಹಮದಾಬಾದ್‌ನ ನರೋಡಾ ಪಾಟಿ ಯಾದಲ್ಲಿ ನಡೆದ ಗಲಭೆಯಲ್ಲಿ 97 ಮಂದಿ ಹತ್ಯೆಯಾಗಿತ್ತು. ಇವರಲ್ಲಿ ಬಹು ತೇಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 120 ಬಿ (ಅಪರಾಧ ಸಂಚು) ಅಡಿಯಲ್ಲಿ ಬಜರಂಗಿ ಹಾಗೂ ಇನ್ನಿಬ್ಬರಾದ ಪ್ರಕಾಶ್ ರಾಠೋಡ್, ಸುರೇಶ್ ಝಾಲಾ ಅಪರಾಧಿಗಳು ಎಂದು ಹೈಕೋರ್ಟ್ ಹೇಳಿದೆ. ಬಜ ರಂಗಿ ಇನ್ನೂ ಜೈಲಿನಲ್ಲಿಯೇ ಇದ್ದಾರೆ. ವಿಚಾರಣಾ ನ್ಯಾಯಾಲಯ ಒಟ್ಟು 32 ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಇವರಲ್ಲಿ ಒಬ್ಬ ಮೃತಪಟ್ಟಿದ್ದ. ಖುಲಾಸೆಗೊಂಡಿದ್ದ ಮೂವರು ಸೇರಿದಂತೆ 12 ಜನರಿಗೆ ಹೈಕೋರ್ಟ್ ಈಗ ಶಿಕ್ಷೆ ವಿಧಿಸಿದ್ದು, 17 ಜನರನ್ನು ಖುಲಾಸೆಗೊಳಿಸಿದೆ. ಉಳಿದ ಇಬ್ಬರು ಆರೋಪಿಗಳ ಕುರಿತು ನ್ಯಾಯಪೀಠ ಇನ್ನೂ ತೀರ್ಪು ನೀಡಿಲ್ಲ.

About the author

ಕನ್ನಡ ಟುಡೆ

Leave a Comment