ರಾಜ್ಯ ಸುದ್ದಿ

ನವರಾತ್ರಿ ಸಂಭ್ರಮ ಆರಂಭ: ಮೈಸೂರು ಅರಮನೆಯಲ್ಲಿ ಕಳೆಕಟ್ಟಿದ ಖಾಸಗಿ ದರ್ಬಾರ್

ಬೆಂಗಳೂರು: ರಾಜ್ಯದ ನಾಡಹಬ್ಬವಾದ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಬುಧವಾರ ಚಾಲನೆ ದೊರಕಿದ್ದು, ಮೈಸೂರು ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಎಲ್ಲರ ಗಮನ ಸೆಳೆಯುತ್ತಿದೆ. ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ಅ.10ರಿಂದ 19ರವರೆಗೂ ನಡೆಯಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಸಂಪ್ರದಾಯದಂತೆ ಖಾಸಗಿ ದರ್ಬಾರ್ ಆರಂಭಿಸಲಿದ್ದು, ನಾಲ್ಕನೇ ಬಾರಿಗೆ ಸಿಂಹಾಸನಾರೋಹಣ ಮಾಡಲಿದ್ದಾರೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅವರ ಪತ್ನಿ ತ್ರಿಷಿಕಾ ಕುಮಾರಿ, ತಾಯಿ ಪ್ರಮೋದಾದೇವಿ ಒಡೆಯರ್, ಕುಟುಂಬ ವರ್ಗದವರು ಹಾಗೂ ಅರಮನೆ ಸಿಬ್ಬಂದಿ ಸಾತ್ ನೀಡಲಿದ್ದಾರೆ.
ನವರಾತ್ರಿ ಇಂದಿನಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ಶಕ್ತಿ ಕೇಂದ್ರಗಳಾದ ಶೃಂಗೇರಿ, ಹೊರನಾಡು, ಕೊಲ್ಲೂರು, ಕಟೀಲು, ಮಂಗಳಾದೇವಿ, ಬಪ್ಪನಾಡು, ಪೊಳಲಿ, ಶಿರಸಿ, ಬನಶಂಕರಿ, ಸವದತ್ತಿ, ಸಿರಸಂಗಿ ಕ್ಷೇತ್ರಗಳಲ್ಲೂ ಇಂದಿನಿಂದ ನವರಾತ್ರಿ ಉತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಅದೇ ರೀತಿ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ದಸರಾ ಉತ್ಸವಕ್ಕೂ ಭರದ ತಯಾರಿಗಳು ನಡೆದಿದೆ.

About the author

ಕನ್ನಡ ಟುಡೆ

Leave a Comment