ರಾಜ್ಯ ಸುದ್ದಿ

ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ, ಹೇಳಿಕೆಗೆ ಕೊನೆಗೂ ಪ್ರತಿಕ್ರಿಯಿಸಿದ ಸಿಎಂ ಎಚ್​ಡಿಕೆ

ಬೆಂಗಳೂರು: ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ. ನನಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಭೇದವಿಲ್ಲ. ರೈತ ಮಹಿಳೆ ಕುರಿತ ನಿನ್ನೆಯ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಭಾರಿ ವಿವಾದ ಸೃಷ್ಟಿಸಿದ್ದ “ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ” ಎಂಬ ಸಿಎಂ ಹೇಳಿಕೆಗೆ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಎಚ್​ಡಿಕೆ, ಮಹಿಳೆ ಬಗ್ಗೆ ಗೌರವವಿದೆ ಎಂದು ಹೇಳಿದ್ದು, ಕ್ಷಮೆ ಬಗ್ಗೆ ಪ್ರಸ್ತಾಪಿಸಿಲ್ಲ.

ಸಕ್ಕರೆ ಕಾರ್ಖಾನೆಗಳು ಹಣ ನೀಡುತ್ತಿಲ್ಲ. ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದ ರೈತ ಮಹಿಳೆ ಜಯಶ್ರೀ ಅವರಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಎಚ್​ಡಿಕೆ, 4 ವರ್ಷಗಳಿಂದ ಹಣ ಕೊಡಲಿಲ್ಲ ಎಂದು ಹೇಳುತ್ತೀಯಲ್ಲ ತಾಯಿ? ಇಷ್ಟು ದಿನ ಎಲ್ಲಿ ಮಲಗಿದ್ದೆ ತಾಯಿ? ನನ್ನ ಮೇಲೆ ಗಧಾ ಪ್ರಹಾರ ಮಾಡುವವರು ಇಷ್ಟು ವರ್ಷ ಯಾಕೆ ಮಾತನಾಡಿಲ್ಲ? ವೋಟು ಹಾಕುವಾಗ ನನ್ನ ನೆನಪು ಆಗಲಿಲ್ಲವಾ? ನಿಮಗೆ ಮಾತನಾಡುವ ಚಪಲವಿದ್ದರೆ ಮಾತನಾಡಿ ಎಂದು ಹೇಳಿದ್ದಲ್ಲದೆ, ಮಾಧ್ಯಮದವರ ವಿರುದ್ಧವೂ ಕಿಡಿ ಕಾರಿದ್ದರು.

ನಾಳೆ ಮಧ್ಯಾಹ್ನ 3 ಗಂಟೆಗೆ ಸಭೆ : ಇನ್ನೂ ನಾಳೆ ಮಧ್ಯಾಹ್ನ 3 ಗಂಟೆಗೆ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಒಮ್ಮತದ ನಿರ್ಣಯ ಹೊರಹೊಮ್ಮುತ್ತದೆ ಎನ್ನುವ ವಿಶ್ವಾಸ ನನ್ನದು ಎಂದಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ನಿನ್ನೆ ರಾತ್ರಿ ಸಕ್ಕರೆ ಆಯುಕ್ತರು ಬೆಳಗಾವಿಯಲ್ಲಿ ಒಂದು ಸಭೆ ನಡೆಸಿ ಚರ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಪ್ರಾಮಾಣಿಕವಾಗಿ ಮಾಡುವೆ. ರೈತರ ಹಿತ ಬಿಟ್ಟರೆ ಬೇರೆ ಯಾವ ಮುಲಾಜೂ ನನಗಿಲ್ಲ. ಈ ಬಗ್ಗೆ ನಮ್ಮ ಬದ್ಧತೆ ಸಂಶಯಾತೀತ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.

ಮೊನ್ನೆ ಮೊನ್ನೆ ಬೆಳಗಾವಿಯ ಜಿಲ್ಲೆಯ ರೈತರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ ನ್ಯಾಯಾಲಯದಿಂದ ಬಂಧನ ವಾರಂಟ್ ಹೊರಡಿಸಿದಾಗಲೂ ಮಧ್ಯಪ್ರವೇಶಿಸಿ ಸಂಧಾನ ಸಭೆ ನಡೆಸಿ, ರೈತರ ರಕ್ಷಣೆಗೆ ಪ್ರಯತ್ನ ನಡೆಸಿದವನು ನಾನು. ಅದು ಉತ್ತರ ಕರ್ನಾಟಕದವ ವಿಷಯ ಎಂದಾಗಲೀ ಬ್ಯಾಂಕು ಮತ್ತು ರೈತರ ನಡುವಿನ ವಿಷಯ ಎಂದು ಕೈಕಟ್ಟಿ ಕೂರಲಿಲ್ಲ ಎಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಏನೇನು ಪ್ರಯತ್ನ ಮಾಡಬಹುದು ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇನೆ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ. ಈಗಾಗಲೇ ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದು ಭರವಸೆ ನೀಡಿದ್ದಾರೆ.

ಶೀಘ್ರವೇ ಸಾಲಮನ್ನಾ : ಸಾಲಮನ್ನಾ ರೈತರ ಸಮಸ್ಯೆಗಳಿಗೆ ಪರಿಹಾರ ಅಲ್ಲ. ಆದರೆ ಒಮ್ಮೆ ರೈತ ಋಣಭಾರ ಕಳೆದುಕೊಂಡು ಹೊಸ ಬದುಕು ಪ್ರಾರಂಭಿಸಬೇಕು ಎಂಬ ಆಶಯದೊಂದಿಗೆ ಸಹಕಾರಿ ಬ್ಯಾಂಕುಗಳಷ್ಟೇ ಅಲ್ಲ, ವಾಣಿಜ್ಯ ಬ್ಯಾಂಕುಗಳಲ್ಲಿನ ಬೆಳೆ ಸಾಲಕ್ಕೂ ನಮ್ಮ ಸರ್ಕಾರ ಮುಂದಾಗಿದೆ.ಜತೆಗೆ ಸಿದ್ಧತೆಯ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರವೇ ಸಾಲಮನ್ನಾ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದಿದ್ದಾರೆ.

ಇದು ನಿಮ್ಮ ಸರ್ಕಾರ ; ರೈತ ಬಾಂಧವರೆ, ನೆನಪಿಡಿ, ಇದು ನಿಮ್ಮ ಸರ್ಕಾರ. ನಿಮ್ಮ ಹಿತ ಕಾಯಲು ಏನೆಲ್ಲ ಪ್ರಯತ್ನ ಮಾಡಲು ಸಾಧ್ಯವೋ, ಅಂತಹ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತ್ತದೆ. ನಾಳಿನ ಸಭೆಯಲ್ಲಿ ನಿಮ್ಮ ಒಳಿತನ್ನಷ್ಟೇ ಕೇಂದ್ರೀಕರಿಸಿ, ಸರ್ಕಾರ ಮಾತುಕತೆ ನಡೆಸಲಿದೆ ಎಂದರು.

About the author

ಕನ್ನಡ ಟುಡೆ

Leave a Comment