ರಾಷ್ಟ್ರ ಸುದ್ದಿ

ಹೊಸದಿಲ್ಲಿ : ನಾವು ಪಾಕಿಸ್ಥಾನ, ಬಾಂಗ್ಲಾಕ್ಕೆ ಹೋಗಬೇಕೇ; ಜಾಥಾ ತಡೆಯಲ್ಪಟ್ಟ ರೈತರು

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದಿದ್ದರೆ ನಾವು ಯಾರ ನೆರವನ್ನು ಕೇಳಬೇಕು ? ಪಾಕಿಸ್ಥಾನದ್ದೋ  ಅಥವಾ ಬಾಂಗ್ಲಾದೇಶದ್ದೋ ? ಎಂದು ದಿಲ್ಲಿಯ ರಾಜ್‌ಘಾಟ್‌ಗೆ ಪ್ರತಿಭಟನಾ ಮೆರವಣಿಯಲ್ಲಿ ಸಾಗುತ್ತಿದ್ದ ಮತ್ತು ದಿಲ್ಲಿ – ಉತ್ತರ ಪ್ರದೇಶ ಗಡಿಯಲ್ಲಿ ತಡೆಯಲ್ಪಟ್ಟ ರೈತರು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌ ಮತ್ತು ಹರಿಯಾಣದ ಸುಮಾರು 70,000 ರೈತರು ಗಾಂಧಿ ಜಯಂತಿ ದಿನವಾದ ಇಂದು ರಾಜಘಾಟ್‌ ಗೆ ಕೈಗೊಂಡಿರುವ ಕಿಸಾನ್‌ ಕ್ರಾಂತಿ ಪಾದಯಾತ್ರೆಯನ್ನು ಪೊಲೀಸರು ಕಾನೂನು ಮತ್ತು ಶಾಂತಿಪಾಲನೆಯ ಕಾರಣಕ್ಕೆ ತಡೆದಾಗ ರೈತರು ಆಕ್ರೋಶಿತರಾದರು.

ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ವಿರೋಧಿಸಿ ಜಾಥಾ ನಡೆಸುತ್ತಿದ್ದ ರೈತರನ್ನು ಪೊಲೀಸರು ತಡೆದಾಗ ಅವರ ನಾಯಕರು “ಕೇಂದ್ರ ಸರಕಾರ ನಮ್ಮ ಅಹವಾಲುಗಳನ್ನು ಆಲಿಸಲು ನಿರಾಕರಿಸಿದರೆ ನಾವು ಯಾರ ಬಾಗಿಲನ್ನು ಬಡಿಯಬೇಕು – ಪಾಕಿಸ್ಥಾನಧ್ದೋ ಅಥವಾ ಬಾಂಗ್ಲಾದೇಶಧ್ದೋ’ ಎಂದು ಖಾರವಾಗಿ ಪ್ರಶ್ನಿಸಿದರು.

”ಯುಪಿ – ದಿಲ್ಲಿ ಗಡಿಯಲ್ಲಿ ನಮ್ಮನ್ನೇಕೆ ತಡೆದು ನಿಲ್ಲಿಸಿದ್ದೀರಿ ? ನಮ್ಮ ಈ ಜಾಥಾ ಶಾಂತಿಯುತವಾಗಿ ಶಿಸ್ತಿನಿಂದ ಸಾಗುತ್ತಿದೆ. ನಮ್ಮ ಸಮಸ್ಯೆಗಳನ್ನು ನಾವು ಸರಕಾರದ ಬಳಿ ಹೇಳುವುದಲ್ಲವಾದರೆ ಇನ್ನು ಯಾರ ಬಳಿ ಹೇಳಬೇಕು ? ನಾವು ಪಾಕಿಸ್ಥಾನಕ್ಕೆ ಹೋಗಬೇಕೇ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕೇ” ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ನರೇಶ್‌ ತಿಕಾಯಿತ್‌ ಪ್ರಶ್ನಿಸಿದರು.

ಸಂಪೂರ್ಣ ಕೃಷಿ ಸಾಲ ಮನ್ನಾ, ವಿದ್ಯುತ್‌ ಶುಲ್ಕದಲ್ಲಿ ಇಳಿಕೆ, 60 ದಾಟಿದ ಪ್ರತಿಯೋರ್ವ ರೈತರಿಗೆ ಪಿಂಚಣಿ ಮುಂತಾಗಿ ಹಲವಾರು ಬೇಡಿಕೆಗಳನ್ನು ಮುಂದಿರಿಸಿ ರೈತರು ರಾಜಘಾಟ್‌ಗೆ ಇಂದು ಜಾಥಾ ಕೈಗೊಂಡಿದ್ದಾರೆ.

ಕಳೆದ ಸೆ.23ರಂದು ಉತ್ತರಾಖಂಡದ ಪತಂಜಲಿಯಿಂದ ಆರಂಭಗೊಂಡಿರುವ ಈ ಜಾಥಾ ಅ.2ರಂದು (ಇಂದು ಮಂಗಳವಾರ) ದಿಲ್ಲಿಯ ಕಿಸಾನ್‌ ಘಾಟ್‌ ತಲುಪುವುದಿತ್ತು. ಈ ಜಾಥಾ ಮುಜಫ‌ರನಗರ, ದೌರಾಲಾ, ಪಾರ್ತಾಪುರ, ಮೋದಿ ನಗರ, ಮರೂದ್‌ನಗರ ಮತ್ತು ಹಿಂದೋನ್‌ ಘಾಟ್‌ ಮಾರ್ಗವಾಗಿ ಸಾಗಿ ಬಂದಿತ್ತು.

 

About the author

ಕನ್ನಡ ಟುಡೆ

Leave a Comment