ರಾಜ್ಯ ಸುದ್ದಿ

ನಿಗಮ ಮಂಡಳಿಗೆ ನೇಮಕಾತಿ: 4 ಶಾಸಕರಿಗೆ ಕುಮಾರ ಕೃಪೆ; ಕೆ. ಸುಧಾಕರ್ ರೆಡ್ಡಿಗಿಲ್ಲ ಅಧ್ಯಕ್ಷ ಭಾಗ್ಯ

ಬೆಂಗಳೂರು: ರಾಜ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿಗಳಿಗೆ ಮತ್ತೊಂದು ಸುತ್ತಿನ ನೇಮಕಾತಿ ನಡೆದಿದೆ. ತೀವ್ರ ಹಗ್ಗಜಗ್ಗಾಟದ ಬಳಿಕ ತಡೆಹಿಡಿಯಲಾಗಿದ್ದ ನಿಗಮ ಮಂಡಳಿಗಳ ಪಟ್ಟಿಯಲ್ಲಿ ಅರ್ಧದಷ್ಟಕ್ಕೆ ಸಿಎಂ ಎಚ್‌ಡಿಕೆ ಬುಧವಾರ ಅಂಕಿತ ಹಾಕಿದ್ದಾರೆ. ಅದರಂತೆ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರಿಗೆ ಪ್ರತಿಷ್ಠಿತ ಬಿಡಿಎ ಅಧ್ಯಕ್ಷ ಸ್ಥಾನ ಒಲಿದಿದೆ. ಬಿಎಂಟಿಸಿ ಅಧ್ಯಕ್ಷರಾಗಿ ಶಾಂತಿನಗರ ಶಾಸಕ ಎನ್‌.ಎ.ಹ್ಯಾರೀಸ್‌ ನೇಮಕಗೊಂಡಿದ್ದಾರೆ. ರೇಷ್ಮೆ ಕೈಗಾರಿಕೆ ನಿಗಮಕ್ಕೆ (ಕೆಎಸ್‌ಐಸಿ) ಬಾಗೇಪಲ್ಲಿ ಶಾಸಕ ಕೆ.ಎನ್‌. ಸುಬ್ಬಾರೆಡ್ಡಿ ನಿಯುಕ್ತಿಗೊಂಡಿದ್ದಾರೆ. ಜತೆಗೆ ಲಿಡ್ಕರ್‌ ಸಂಸ್ಥೆಗೆ ಪ್ರಸಾದ್‌ ಅಬ್ಬಯ್ಯ ಅವರನ್ನು ನೇಮಿಸಲಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ.ಸುಧಾಕರ್‌ ಹೆಸರು ಶಿಫಾರಸು ಮಾಡಲಾಗಿದ್ದರೂ ತಾಂತ್ರಿಕ ಕಾರಣದಿಂದ ತಡೆಹಿಡಿಯಲಾಗಿತ್ತು. ಈ ಬಾರಿಯೂ ಸುಧಾಕರ್‌ ನೇಮಕಕ್ಕೆ ಸಿಎಂ ಸಮ್ಮಿತಿ ನೀಡಿಲ್ಲ. ಈ ಮಧ್ಯೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆ ಜೆಡಿಎಸ್‌ ತೆಕ್ಕೆಗೆ ಹೋಗುವುದು ನಿಶ್ಚಿತವಾಗಿದೆ. ಕಾಂಗ್ರೆಸ್‌ನ ವಿ.ಮುನಿಯಪ್ಪ ಅವರನ್ನು ನೇಮಿಸುವಂತೆ ಶಿಫಾರಸು ಮಾಡಲಾಗಿದ್ದರೂ ಇದನ್ನು ಒಪ್ಪಲು ಸಿಎಂ ಸಿದ್ಧರಿಲ್ಲ. ಹಾಗಾಗಿ ಕಾಂಗ್ರೆಸ್‌ ನಾಯಕರೂ ತಣ್ಣಗಾಗಿದ್ದು ಈ ನೇಮಕವನ್ನು ಸಿಎಂ ವಿವೇಚನೆಗೆ ಬಿಡಲು ತೀರ್ಮಾನಿಸಿದ್ದಾರೆ.
ಸರಕಾರದ ದಿಲ್ಲಿ ಪ್ರತಿನಿಧಿ (ಡಾ.ಅಜಯ್‌ ಸಿಂಗ್‌), ಯೋಜನಾ ಆಯೋಗ ಉಪಾಧ್ಯಕ್ಷ ಸ್ಥಾನ (ಶರಣಬಸಪ್ಪ ದರ್ಶನಾಪುರ) ನೇಮಕದ ಸಾಧ್ಯತೆಯಿದೆ. ಆದರೆ, ಸಚಿವ ರೇವಣ್ಣ ವಿರೋಧ ಇರುವುದರಿಂದ ಹಾಸನ ಜಿಲ್ಲೆಯ ಕಾಂಗ್ರೆಸ್‌ ಎಂಎಲ್ಸಿ ಗೋಪಾಲಸ್ವಾಮಿ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ದೊರಕುವುದು ಅನುಮಾನ. ಹಾಗೆಯೇ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಆರ್‌ಡಿಸಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.
ಕುತೂಹಲದ ಸಂಗತಿಯೆಂದರೆ ತಾವು ನಿರ್ವಹಿಸುವ ಖಾತೆಗಳಡಿ ಬರುವ ಸಂಸ್ಥೆಗಳಿಗೆ ಕಾಂಗ್ರೆಸ್‌ ಶಾಸಕರ ನೇಮಕ ಬೇಡವೆಂದು ಜೆಡಿಎಸ್‌ ಸಚಿವರು ಒತ್ತಡ ತಂದಿದ್ದರು. ಆದರೆ, ಈ ಮಾನದಂಡ ರೇವಣ್ಣ ಅವರ ಖಾತೆಗಷ್ಟೇ ಅನ್ವಯವಾಗಿದೆ. ಆದರೆ ಡಿ,ಸಿ ತಮ್ಮಣ್ಣ ಖಾತೆಗೆ ಇದು ವಿಸ್ತರಣೆಯಾಗಿಲ್ಲ. ಯಾಕೆಂದರೆ, ಸಾರಿಗೆ ಇಲಾಖೆಯ ಲಾಭದಾಯಕ ಸಂಸ್ಥೆಯಾಗಿರುವ ಬಿಎಂಟಿಸಿ ಕಾಂಗ್ರೆಸ್‌ ಪಾಲಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬುಧವಾರ ಸಿಎಂ ಕುಮಾರ ಸ್ವಾಮಿ ಅವರಿಗೆ ಕರೆ ಮಾಡಿ, ತಡೆ ಹಿಡಿದಿರುವ ನಿಗಮ -ಮಂಡಳಿ ನೇಮಕಾತಿ ಪಟ್ಟಿಗೆ ಅಂಕಿತ ಹಾಕಬೇಕೆಂದು ಕೇಳಿದ್ದರು ಎಂದು ಮೂಲಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment