ಸಾಂಸ್ಕ್ರತಿಕ

ನಿಜಾಂ ಮ್ಯೂಸಿಯಂನಿಂದ ವಜ್ರಖಚಿತ ಚಿನ್ನದ ಟಿಫಿನ್‌ ಬಾಕ್ಸ್‌ ಪತ್ತೆ

ಹೈದರಾಬಾದ್‌: ನಿಜಾಂ ಮ್ಯೂಸಿಯಂನಿಂದ ವಜ್ರಖಚಿತ ಚಿನ್ನದ ಟಿಫಿನ್‌ ಬಾಕ್ಸ್‌ ಸೇರಿ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡಿದ್ದ ಇಬ್ಬರು ವ್ಯಕ್ತಿಗಳನ್ನು ಹೈದರಾಬಾದ್‌ ಪೊಲೀಸರು ಸೋಮವಾರ ರಾತ್ರಿ ಬಂದಿಸಿದ್ದಾರೆ. ಏಳನೇ ನಿಜಾಮನಿಗೆ ಸೇರಿದ್ದ ಈ ಟಿಫನ್ ಬಾಕ್ಸ್ ಜತೆಗೆ ಬಂಗಾರದ ಟೀ ಕಪ್, ಎರಡು ಸಾಸರ್ ಮತ್ತು ಚಮಚವನ್ನು ಕಳ್ಳರಿಂದ ಮರಳಿ ಪಡೆಯಲಾಗಿದೆ. ಬಂಧಿತರನ್ನು ಮೊಹದ್‌ ಘೋಶ್‌ ಪಾಶಾ ಅಲಿಯಾಸ್‌ ಖೂನಿ(23) ಮತ್ತು 24 ವರ್ಷದ ಮೊಹದ್‌ ಮುಬೀನ್‌ ಎಂದು ಗುರುತಿಸಲಾಗಿದ್ದು, ರಾಜೇಂದ್ರನಗರದಲ್ಲಿ ಓರ್ವ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ವೆಲ್ಡಿಂಗ್ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್‌ ಪೊಲೀಸ್‌ ಆಯುಕ್ತ ಪ್ರತಿಕ್ರಿಯಿಸಿ, 30 ದಿನಗಳು ಕಳೆದ ನಂತರ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಲಭ್ಯವಾಗುವುದಿಲ್ಲ ಎಂಬುದನ್ನು ಅರಿತಿದ್ದ ಖದೀಮರು ಕಳ್ಳತನ ನಡೆಯುವ 45 ದಿನಗಳಿಗೂ ಮುಂಚೆ ಮ್ಯೂಸಿಯಂ ಆವರಣಕ್ಕೆ ಭೇಟಿ ನೀಡಿ ಅಲ್ಲಿನ ಆಗುಹೋಗುಗಳನ್ನು ಗಮನಿಸಿದ್ದರು. ಬಾಲ್ಯ ಸ್ನೇಹಿತರಾಗಿದ್ದ ಇಬ್ಬರು, ದೂರದ ಸಂಬಂಧಿಗಳು ಆಗಿದ್ದರು. ಆಸ್ತಿ ವಿಚಾರದ ಬೇರೆ ಪ್ರಕರಣಗಳಲ್ಲೂ ಇವರಿಬ್ಬರು ಅಪರಾಧಿಗಳಾಗಿದ್ದರು.

ಕಳ್ಳತನ ಎಸಗುವ 4 ರಿಂದ 5 ದಿನಗಳಿಗೂ ಮುಂಚೆ ಮ್ಯೂಸಿಯಂ ಒಳಗಡೆ ತೆರಳಲು ಯೋಜನೆ ರೂಪಿಸಿದ್ದರು. ಅಲ್ಲದೆ 45 ದಿನಗಳ ಹಿಂದೆ ಮ್ಯೂಸಿಯಂ ಒಳಗೆ ಭೇಟಿ ನೀಡಿದ್ದ ಮುಬೀನ್‌, ಅಲ್ಲಿನ ಕಳಪೆ ಭದ್ರತೆಯನ್ನು ಗಮನಿಸಿದ್ದ. ನಂತರ ತನ್ನ ಯೋಜನೆ ಕುರಿತಂತೆ ಘೋಶ್‌ನೊಂದಿಗೆ ಚರ್ಚಿಸಿ ಕಳ್ಳತನ ಮಾಡಲು ಯೋಜನೆ ರೂಪಿಸಿದ್ದರು ಎಂದು ತಿಳಿಸಿದ್ದಾರೆ. ಮ್ಯೂಸಿಯಂ ಇರುವ ಪುರಾನಿ ಹವೇಲಿಯ ಮೊದಲ ಮಹಡಿಯಲ್ಲಿ ಮುಬೀನ್‌ ಹಗ್ಗವನ್ನು ಹಿಡಿದಿದ್ದಾನೆ. ಆಗ ಘೋಶ್‌ ಹಗ್ಗವನ್ನು ಬಳಸಿ ಒಳಗೆ ಇಳಿದಿದ್ದು, ಗಾಜಿನ ಕಪಾಟಿನ ಲಾಕ್‌ ಮುರಿದು ನಿಜಾಮ್‌ಗೆ ಸೇರಿದ್ದ ಉಡುಗೊರೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ನಂತರ ಮುಂಬೈಗೆ ತೆರಳಿದ್ದ ಕಳ್ಳರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಚಮಚಗಳನ್ನು ಮಾರಲು ಮುಂದಾಗಿದ್ದಾರೆ. ಆದರೆ, ಒಳ್ಳೆಯ ಬೆಲೆ ಸಿಗದ ಕಾರಣ ಉತ್ತಮ ಬೆಲೆಗಾಗಿ ಕಾಯುತ್ತಿದ್ದರು.

ವೆಂಟಿಲೇಟರ್‌ ಸುತ್ತಲು ಉಳಿದಿದ್ದ ಗುರುತುಗಳ ಸಹಾಯದಿಂದ ತನಿಖೆಗೆ ಮುಂದಾಗಿದ್ದ ಪೊಲೀಸರಿಗೆ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಮತ್ತೊಂದು ಸುದ್ದಿ ಸಂಸ್ಥೆ ವರದಿ ಪ್ರಕಾರ, ಹಲವು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಟಿಫಿನ್‌ ಬಾಕ್ಸ್‌ ಅನ್ನು ನಿಜಾಮನು ಕೂಡ ಬಳಸಿದ್ದನೋ ಇಲ್ಲವೋ, ಆದರೆ ಕಳ್ಳರಲ್ಲಿ ಒಬ್ಬಾತ ಮಾತ್ರ ಅದನ್ನು ಪ್ರತಿದಿನ ಬಳಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ ಮ್ಯೂಸಿಯಂನಲ್ಲಿದ್ದ ಪವಿತ್ರ ಪುಸ್ತಕವನ್ನು ಕೂಡ ಕದಿಯಲು ಪ್ಲ್ಯಾನ್‌ ಮಾಡಿದ್ದರು. ಆದರೆ ಕಳ್ಳತನಕ್ಕೆ ಮುಂದಾಗಿದ್ದಾಗ ಪಕ್ಕದಲ್ಲೆಲ್ಲೋ ಸಾಮೂಹಿಕ ಪ್ರಾರ್ಥನೆ ಕೇಳಿಬಂದ ಹಿನ್ನೆಲೆಯಲ್ಲಿ ಭಯದಿಂದ ಕೈಗೆ ಸಿಕ್ಕಷ್ಟು ದೋಚಿ ಪರಾರಿಯಾಗಿದ್ದರು ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment