ರಾಷ್ಟ್ರ ಸುದ್ದಿ

ನಿನ್ನೆ ಏನು ಮಾತನಾಡಿದೆ ಎಂದು ರಾಹುಲ್‌ಗೆ ಇಂದು ನೆನಪಿರುವುದಿಲ್ಲ: ಪ್ರಧಾನಿ ಮೋದಿ

ಹೈದರಾಬಾದ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಮರಣಕಳೆದುಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕುಹಕವಾಡಿದ್ದಾರೆ.

ಪಂಚರಾಜ್ಯ ವಿಧಾನ ಸಭಾ ಚುನಾವಣಾ ಕಣ ರಂಗೇರಿದ್ದು ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ  ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸೋಮವಾರ ಮುತ್ತಿನ ನಗರಿ ಹೈದರಾಬಾದಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರಧಾನಿ ಮೋದಿ ಅವರು, ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಚಾರದ ವೇಳೆ ರಾಹುಲ್ ಜೆಡಿಎಸ್‌ ಅನ್ನು ಬಿಜೆಪಿಯ ‘ಬಿ ಟೀಮ್‌’ ಎಂದೇ ಕರೆದಿದ್ದರು. ಬಳಿಕ ಅದೇ ಪಕ್ಷದ ಜತೆ ಕೈ ಜೋಡಿಸಿ ಸರಕಾರ ರಚಿಸಿದರು. ತೆಲಂಗಾಣದಲ್ಲೂ ಕಾಂಗ್ರೆಸ್‌ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಗುಟ್ಟಾಗಿ ಒಂದಾಗಿವೆ. ಈ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದಿದ್ದಾರೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಟಿಆರ್‌ಎಸ್‌ ಅನ್ನು ರಾಹುಲ್‌ ಗಾಂಧಿ ಬಿಜೆಪಿಯ ಬಿ ಟೀಮ್ ಎಂದು ಹೇಳಿಕೆ ನೀಡಿದಕ್ಕೆ ಪ್ರತಿಯೇಟು ನೀಡಿದ ಪ್ರಧಾನಿ, ಕರ್ನಾಟಕದಲ್ಲಿ ಸುಳ್ಳನ್ನು ಹರಡಿದ ಬಳಿಕ ಕಾಂಗ್ರೆಸ್ ಅದೇ ತರಹದ ಆಟವನ್ನು ತೆಲಂಗಾಣದಲ್ಲೂ ಆಡುತ್ತಿದ್ದು, ಟಿಆರ್‌ಎಸ್ ಬಿಜೆಪಿಯ ಬಿ ಟೀಮ್ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಎರಡು ಪಕ್ಷಗಳು ಸೇರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿರುವಂತೆ ಮಾಡಲು ಏನು ಮಾಡಬೇಕು ಎಂದು ಹಿಂದಿನ ಬಾಗಿಲಿಂದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಅಧಿಕಾರ ಹಂಚಿಕೊಳ್ಳುವ ಇರಾದೆ ಅವರದು, ಎಂದು ಪ್ರಧಾನಿ ಹೇಳಿದ್ದಾರೆ.

ಈ ನಾಮ್‌ದಾರ್ (ರಾಹುಲ್ ಗಾಂಧಿ) ಸಮಸ್ಯೆ ಏನೆಂದರೆ ನಿನ್ನೆ ಏನು ಮಾತನಾಡಿದೆ ಎಂದು ಅವರಿಗೆ ನೆನಪಿರುವುದಿಲ್ಲ. ಎಲ್ಲಿ, ಯಾವಾಗ, ಏನು ಹೇಳಿದೆ ಎಂಬುದೇ ಗೊತ್ತಿರುವುದಿಲ್ಲ. ಮತ್ತೀಗ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರಿಗೆ ಏನೇನೂ ನೆನಪಿರುವುದಿಲ್ಲ. ಅವರು ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ ಎಂದರು.

About the author

ಕನ್ನಡ ಟುಡೆ

Leave a Comment