ರಾಷ್ಟ್ರ ಸುದ್ದಿ

ನಿಮ್ಮ ಗೋತ್ರ ಯಾವುದು, ರಾಹುಲ್ ಗಾಂಧಿಗೆ ಬಿಜೆಪಿ ವಕ್ತಾರ ಸಾಂಬಿತ್ ಪಾತ್ರ ಪ್ರಶ್ನೆ

ಇಂದೋರ್ (ಮಧ್ಯ ಪ್ರದೇಶ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ನಿಮ್ಮ ಗೋತ್ರ ಯಾವುದು ಎಂದು ಕೇಳಿದೆ. ಇಂದೋರ್ ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಾಂಬಿತ್ ಪಾತ್ರ, ರಾಹುಲ್ ಅವರು ಜನಿವಾರ ಧರಿಸುತ್ತಿದ್ದರೆ ಯಾವ ವಿಧದ ಜನಿವಾರವನ್ನು ಅವರು ಧರಿಸುತ್ತಿದ್ದಾರೆ, ಅವರ ಗೋತ್ರ ಯಾವುದು ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಉಜ್ಜಯಿನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲೆ ಕುಳಿತಿಕೊಂಡ ಚೇಳಿನಂತೆ ಎಂದು ಆರ್ ಎಸ್ಎಸ್ ನಾಯಕರೊಬ್ಬರು ಹೇಳಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿರುವುದಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಬಿಜೆಪಿ ಈ ವಾಗ್ದಾಳಿ ನಡೆಸಿದೆ.ತರೂರ್ ಅವರನ್ನು ಪಕ್ಷದಿಂದ ವಜಾಗೊಳಿಸಬೇಕೆಂದು ರಾಹುಲ್ ಗಾಂಧಿಯನ್ನು ಪಾತ್ರ ಒತ್ತಾಯಿಸಿದರು. ಶಿವ ದೇವರ ಬಗ್ಗೆ ಕಾಂಗ್ರೆಸ್ ಕೆಟ್ಟದಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು ತಕ್ಷಣವೇ ಶಶಿ ತರೂರ್ ಅವರನ್ನು ಪಕ್ಷದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದರು.

ಕಳೆದ ವರ್ಷ ನವೆಂಬರ್ ನಲ್ಲಿ ರಾಹುಲ್ ಗಾಂಧಿ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ, ನಾನು ಶಿವಭಕ್ತ, ಬಿಜೆಪಿ ಏನೇ ಹೇಳಲಿ, ನಾನು ಮಾತ್ರ ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದ್ದರು.ಅದಕ್ಕೆ ಬಿಜೆಪಿ, ಕಾಂಗ್ರೆಸ್ ಶಿವದೇವರ ಹೆಸರಿನಲ್ಲಿ ಜಾತ್ಯಾತೀತತೆ ಮುಂದಿಟ್ಟುಕೊಂಡು ಚುನಾವಣೆ ಗಿಮಿಕ್ ಮಾಡುತ್ತಿದೆ. ಆದರೆ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡಿಕೊಳ್ಳುತ್ತದೆ ಎಂದು ಟೀಕಿಸಿದರು.

About the author

ಕನ್ನಡ ಟುಡೆ

Leave a Comment