ರಾಜ್ಯ ಸುದ್ದಿ

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಬಿಜೆಪಿ ನಾಯಕ ಈಶ್ವರಪ್ಪ ಸೇರಿ 7 ಮಂದಿ ಖುಲಾಸೆ

ಬೆಂಗಳೂರು: ಚುನಾಯಿತ ಜನಪ್ರತಿನಿಧಿಗಳ ಕ್ರಿಮಿನಲ್ ಕೇಸ್ ಗಳನ್ನು ಇತ್ಯರ್ಥಪಡಿಸುವ ವಿಶೇಷ ನ್ಯಾಯಾಲಯವು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಇತರೆ ಏಳು ಮಂದಿಯನ್ನು ಖುಲಾಸೆಗೊಳಿಸಿದೆ. 2011ರ ಉಪಚುನಾವಣೆ ಸಮಯದಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸಂಗನಕಲ್ಲು ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆ ಉತ್ತೇಜನಕ್ಕಾಗಿ ಧಾರ್ಮಿಕ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಈಶ್ವರಪ್ಪ ಹಾಗೂ ಇತರರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರೆಂದು ಚುನಾವಣಾ ಆಯೋಗ ದೂರು ದಾಖಲಿಸಿತ್ತು.
ಮಾಜಿ ಎಂಎಲ್ಸಿ ಶಶೀಲ್ ನಮೋಶಿ, ಈಶ್ವರಪ್ಪ, ಮಾಜಿ ಬಿಜೆಪಿ ಅಭ್ಯರ್ಥಿ ಪಿ.ಗದಿಲಿಂಗಪ್ಪ, ಮಾಜಿ ಶಾಸಕ ಬಿ. ಶಿವರಾಮ ರೆಡ್ಡಿ, ಎಸ್. ಇಂಧುಶೇಕರ್ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮೂವರು ಪುರೋಹಿತರಾದ ಉಮಾಮಹೇಶ್ವರಿ, ರಾಮಂಜನೇಯ ಮತ್ತು ಸೀತಾರಾಮ ಅವರುಗಳು ದೋಷಮುಕ್ತರಾಗಿದ್ದಾರೆ. ಸ್ಥಳೀಯ ಪೋಲೀಸರ ಅನುಮತಿ ಪಡೆಯದೆ ರಾಜಕೀಯ ಚಟುವಟಿಕೆಗಾಗಿ ದೇವಸ್ಥಾನದ ಆವರಣವನ್ನು ಬಳಸಲು ಅವಕಾಶ ಕಲ್ಪಿಸಿದ್ದ್ದಕ್ಕಾಗಿ ಈ ಅರ್ಚಕರ ಮೇಲೆ ದೂರು ದಾಖಲಾಗಿತ್ತು. ನ್ಯಾಯಾಧೀಶ ಬಿ.ವಿ. ಪಾಟೀಲ್ ಅವರನ್ನೊಳಗೊಂಡ ಪೀಠ ಈ ತೀರ್ಪು ಪ್ರಕಟಿಸಿದ್ದು ಸಾಕ್ಷಿಗಳು ವಿರೋಧಾಭಾಸದ ಹೇಳಿಕೆ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು ಅಲ್ಲದೆ ಆಪಾದನೆ ಸಾಬೀತಿಗೆ ಸಾಕಷ್ಟು ಸಾಕ್ಷಿಗಳಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.”ತಮ್ಮ ರಾಜಕೀಯ ಚಟುವಟಿಕೆಯನ್ನು ಉತ್ತೇಜಿಸಲು ಮತ್ತು ಪ್ರಚಾರ ಮಾಡಲು ಆರೋಪಿಗಳು ಧಾರ್ಮಿಕ ಸ್ಥಳವನ್ನು ದುರ್ಬಳಕೆ ಮಾಡುವ ಬಗ್ಗೆ ಸಾಕ್ಷಿಗಳು ಯಾವುದೇ ಸ್ಪಷ್ಟನೆ ಕೊಡಲು ವಿಫಲರಾಗಿದ್ದಾರೆ. ಪ್ರತ್ಯಕ್ಷದರ್ಶಿಗಳು ಪ್ರಕರಣದ ದಾಖಲಿಸುವ ಹಿಂದೆ ಅವರ ಹಗೆತನ ಅಥವ ಸೇಡಿನ ಉದ್ದೇಶವಿದೆ.”  ಎಂದು ವಿಶೇಷ ನ್ಯಾಯಾಲಯ ತಿಳಿಸಿದೆ.
ನವೆಂಬರ್ 19, 2011 ರಂದು ಬಳ್ಳಾರಿತಾಲ್ಲೂಕಿನ ತಹಶೀಲ್ದಾರ್ ಶಶಿಧರ ಬಾಗಲಿ ಈಶ್ವರಪ್ಪ ಸೇರಿ ಇತರೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.ಇದಕ್ಕೆ ಸಂಬಂಧಿಸಿ ಬಳ್ಳಾರಿಉ ಗ್ರಾಮೀಣ ವಿಭಾಗದ ಪೋಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

About the author

ಕನ್ನಡ ಟುಡೆ

Leave a Comment