ರಾಜ್ಯ ಸುದ್ದಿ

ನೀರಿಗೆ ಬಿದ್ದರೂ ಅಂಕ ಅಳಿಸಿ ಹೋಗಲ್ಲ, ಹರಿಯಲು ಸಾಧ್ಯವಾಗಲ್ಲ SSLC ಅಂಕಪಟ್ಟಿ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮತ್ತಷ್ಟು ಸುರಕ್ಷಿತವಾದ ಅಂಕಪಟ್ಟಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯೋನ್ಮುಖವಾಗಿದೆ. ಒಂದು ವೇಳೆ ಅಂಕಪಟ್ಟಿ ನೀರಿಗೆ ಬಿದ್ದರೂ ಅಂಕಗಳು ಅಳಿಸಿ ಹೋಗದ ಹಾಗೂ ಹರಿಯಲು ಸಾಧ್ಯವಾಗದ ಅಂಕಪಟ್ಟಿ ಒದಗಿಸಲು ಮಂಡಳಿ ಮುಂದಾಗಿದೆ. 2019ರ ಮಾರ್ಚ್‌/ ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಂತಹ ಅಂಕಪಟ್ಟಿಗಳು ಲಭ್ಯವಾಗಲಿವೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಸ್ತುತ ಲ್ಯಾಮಿನೇಷನ್‌ ರೂಪದಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ಒದಗಿಸುತ್ತಿದೆ. ಆದರೆ, ಲ್ಯಾಮಿನೇಷನ್‌ ಮಾಡಿದ ಅಂಕಪಟ್ಟಿಗಳನ್ನು ಬಹಳ ದಿನ ಸುರಕ್ಷಿತವಾಗಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ಮಂಡಳಿಗೆ ಅನೇಕ ದೂರುಗಳು ಬಂದಿವೆ. ”ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಪ್ರತಿಯೊಬ್ಬರಿಗೂ ಪ್ರಮುಖವಾಗಿದೆ. ಹೀಗಾಗಿ, ಅದು ಹಾನಿಗೊಳಗಾಗದಂತೆ ಜೋಪಾನವಾಗಿ ಕಾಪಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೀರಿಗೆ ಬಿದ್ದರೂ ಅಂಕಗಳು ಅಳಿಸಿ ಹೋಗದಂತಹ ಹಾಗೂ ಹರಿದು ಹಾಕಲು ಸಾಧ್ಯವಾಗದಂತಹ ಸುರಕ್ಷಿತವಾದ ಅಂಕಪಟ್ಟಿಯನ್ನು ಒದಗಿಸಲು ಉದ್ದೇಶಿಸಲಾಗಿದೆ” ಎಂದು ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.

ಪ್ರಸ್ತುತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲ್ಯಾಮಿನೇಷನ್‌ ಮಾಡಿದ ಅಂಕಪಟ್ಟಿ ವಿತರಿಸುತ್ತಿದೆ. ಪರೀಕ್ಷಾ ಶುಲ್ಕ ಹಾಗೂ ಲ್ಯಾಮಿನೇಷನ್‌ ವೆಚ್ಚಕ್ಕಾಗಿ 20 ರೂ. ಶುಲ್ಕ ಸಂಗ್ರಹಿಸುತ್ತಿದೆ. ಆದರೆ, ಈಗಾಗಲೇ ಪರೀಕ್ಷಾ ಶುಲ್ಕ ಹೆಚ್ಚಿಸಿರುವುದರಿಂದ ಸುರಕ್ಷಿತ ಅಂಕಪಟ್ಟಿ ನೀಡುವುದಕ್ಕೆ ಮತ್ತೆ ಶುಲ್ಕ ಹೆಚ್ಚಿಸುವ ಸಾಧ್ಯತೆಗಳಿಲ್ಲ ಎಂದು ಮಂಡಳಿ ಮೂಲಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment