ದೇಶ ವಿದೇಶ

ನೀವು ಅಷ್ಟು ಉದಾರಿ ಮತ್ತು ಮುತ್ಸದ್ಧಿಯಾಗಿದ್ದರೆ ಮಸೂದ್ ಅಜರ್ ನನ್ನು ಭಾರತಕ್ಕೆ ಒಪ್ಪಿಸಿ: ಪಾಕ್ ಗೆ ವಿದೇಶಾಂಗ ಸಚಿವೆ ಸುಷ್ಮಾ ಸವಾಲು

ನವದೆಹಲಿ: ತನ್ನ ನೆಲದಲ್ಲಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಾಕಿಸ್ತಾನದ ಜೊತೆಗೆ ಶಾಂತಿ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಅವರು ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೆಲವರು ಪಾಕಿಸ್ತಾನ ಪ್ರಧಾನಿ ಉತ್ತಮ ಆಡಳಿತಗಾರ ಎಂದು ಹೇಳುತ್ತಾರೆ. ಅವರು ಅಷ್ಟು ಪ್ರಾಮಾಣಿಕ, ಉದಾರ ಮನಸ್ಸಿನ ವ್ಯಕ್ತಿಯಾಗಿದ್ದರೆ ಜೈಶ್ ಎ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಭಾರತಕ್ಕೆ ಹಸ್ತಾಂತರಿಸಲಿ. ಆಗ ಅವರ ಪ್ರಾಮಾಣಿಕತೆಯನ್ನು ಒಪ್ಪುತ್ತೇವೆ ಎಂದರು.
ಭಯೋತ್ಪಾದನೆ ಮುಕ್ತ ವಾತಾವರಣದಲ್ಲಿ ನಾವು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ, ಹಿಂಸಾಚಾರ ಮತ್ತು ಶಾಂತಿ ಮಾತುಕತೆ ಒಟ್ಟೊಟ್ಟಿಗೆ ಸಾಗುವುದಿಲ್ಲ ಎಂದು ಹೇಳಿದರು. ಬಾಲಕೋಟ್ ನಲ್ಲಿ ಭಾರತೀಯ ವಾಯುದಾಳಿಗೆ ಪಾಕಿಸ್ತಾನದ ಪ್ರತ್ಯುತ್ತರದ ಬಗ್ಗೆ ಪ್ರಶ್ನಿಸಿದಾಗ ಸುಷ್ಮಾ ಸ್ವರಾಜ್, ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನೇ ಗುರಿಯಾಗಿಟ್ಟುಕೊಂಡು ಭಾರತ ವಾಯುದಾಳಿ ಮಾಡಿದೆ. ಆದರೆ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮಿಲಿಟರಿ ಜೈಶ್ ಎ ಮೊಹಮ್ಮದ್ ಪರವಾಗಿ ನಮ್ಮ ಮೇಲೇಕೆ ದಾಳಿ ಮಾಡಬೇಕು ಎಂದು ಪ್ರಶ್ನಿಸಿದರು. ನೀವು ಜೆಇಎಂ ಸಂಘಟನೆಯನ್ನು ನಿಮ್ಮ ಮಣ್ಣಿನಲ್ಲಿ ಸಾಕಿ ಬೆಳೆಸಿ ಪೋಷಿಸುತ್ತಿದ್ದೀರಿ. ಭಾರತ ಅದಕ್ಕೆ ಪ್ರತಿಯಾಗಿ ದಾಳಿ ಮಾಡಿದಾಗ ಭಯೋತ್ಪಾದಕರ ಪರವಾಗಿ ನೀವು ದಾಳಿ ಮಾಡುತ್ತೀರಿ ಎಂದು ಪಾಕಿಸ್ತಾನ ಸರ್ಕಾರದ ಮೇಲೆ ಸುಷ್ಮಾ ಸ್ವರಾಜ್ ಹರಿಹಾಯ್ದರು. ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧವನ್ನು ನಾಶಗೊಳಿಸಲು ಹೊರಟಿರುವ ಐಎಸ್ಐ ಮತ್ತು ಅದರ ಸೇನೆಯನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದರು.

About the author

ಕನ್ನಡ ಟುಡೆ

Leave a Comment