ಆಹಾರ

ನೆಗಡಿ ನಿವಾರಣೆಗೆ ಕಡ್ಲೆ ಹಿಟ್ಟಿನ ಶೀರ

ಬಿಡದೆ ಕಾಡುವ ನೆಗಡಿ ಮತ್ತು ಕೆಮ್ಮು ನಿವಾರಣೆಗೆ ಕಡ್ಲೆ ಹಿಟ್ಟಿನ ಶೀರ ಸೇವನೆ ಬೆಸ್ಟ್‌ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಳಸುವ ಸಾಮಗ್ರಿ ದೇಹವನ್ನು ಬೆಚ್ಚಗಿಡುತ್ತದೆ. 

ಪಂಜಾಬಿಯನ್ನರ ಸಾಂಪ್ರದಾಯಿಕ ಸಿಹಿ ತಿನಿಸು ಕಡ್ಲೆ ಹಿಟ್ಟಿನ ಶೀರದಲ್ಲಿ ಕೆಲವು ಔಷಧೀಯ ಗುಣಗಳಿದ್ದು, ಇವು ನೆಗಡಿ ಮತ್ತು ಕೆಮ್ಮು ನಿವಾರಣೆಗೆ ಬೆಸ್ಟ್‌ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಿಹಿ ತಿನಿಸಿಗೆ ಬಳಸುವ ಕಡ್ಲೆ ಹಿಟ್ಟು, ತುಪ್ಪ, ಅರಶಿನ, ಕಾಳುಮೆಣಸು ಮತ್ತು ಡ್ರೈಫ್ರೂಟ್ಸ್‌ ಕಾಂಬಿನೇಷನ್‌ ಶಕ್ತಿಯ ಆಗರವಾಗಿದೆ. ಇದರಲ್ಲಿರುವ ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿ ನಿರೋಧಕ ಅಂಶಗಳು ತಾಪಮಾನ ಬದಲಾವಣೆಯಿಂದ ಉಂಟಾಗುವ ಸೋಂಕನ್ನು ನಿವಾರಿಸಲು ನೆರವಾಗುತ್ತವೆ. ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ ನೆಗಡಿಯನ್ನು ದೂರವಿಡಲು ಸಾಧ್ಯವಿದೆ.

ಆ್ಯಂಟಿಆಕ್ಸಿಡೆಂಟ್ಸ್‌ ಇದೆ 

ಕಡ್ಲೆ ಹಿಟ್ಟು ಆ್ಯಂಟಿಆಕ್ಸಿಡೆಂಟ್ಸ್‌ನ ಆಗರವಾಗಿದ್ದು ಇದು ಕಟ್ಟಿಕೊಂಡಿರುವ ಮೂಗಿನ ದ್ವಾರಗಳನ್ನು ಸಡಿಲಗೊಳಿಸಿ ಉಸಿರಾಟವನ್ನು ಸರಾಗವಾಗಿಸುತ್ತದೆ. ವಿಟಮಿನ್‌ ಬಿ1 ಯಥೇಚ್ಛವಾಗಿರುವ ಈ ಹಿಟ್ಟು ಕೆಮ್ಮು ಮತ್ತು ನೆಗಡಿಯಿಂದ ಉಂಟಾಗುವ ನಿಶ್ಯಕ್ತಿ ಮತ್ತು ಆಯಾಸವನ್ನು ಹೋಗಲಾಡಿಸಿ ದೇಹಕ್ಕೆ ಶಕ್ತಿ ತುಂಬುತ್ತದೆ.

ಬ್ಯಾಕ್ಟೀರಿಯ ನಿರೋಧಕ 

ಈ ತಿನಿಸಿಗೆ ಬಳಸಿದ ಅರಶಿನದಲ್ಲಿ ಕುರ್ಕುಮಿನ್‌ ಅಂಶ ಹೆಚ್ಚಿದ್ದು ಇದು ಉರಿ ನಿರೋಧಕ, ಬ್ಯಾಕ್ಟೀರಿಯ ನಿರೋಧಕ ಮತ್ತು ವೈರಸ್‌ ನಿರೋಧಕ ಗುಣಗಳನ್ನು ಹೊಂದಿದೆ. ಸತತ ಕೆಮ್ಮಿನಿಂದ ಎದೆ ಕಟ್ಟಿಕೊಂಡಿದ್ದರೆ ಕಡ್ಲೆ ಹಿಟ್ಟಿನ ಶೀರ ತಿಂದರೆ ಹಾಯೆನಿಸುತ್ತದೆ. ಇದಕ್ಕೆ ಬಳಸಿದ ಕಾಳುಮೆಣಸಿನ ಪುಡಿಯೂ ದೇಹವನ್ನು ಬೆಚ್ಚಗಿಡುತ್ತದೆ.

ಗರ್ಭಿಣಿಯರಿಗೆ ಬೆಸ್ಟ್‌ 

ಹೊಟ್ಟೆಯಲ್ಲಿರುವ ಭ್ರೂಣದ ಮಿದುಳು ಮತ್ತು ಬೆನ್ನುಹುರಿಯ ರಚನೆಗೆ ನೆರವಾಗುವ ಫೊಲೆಟ್‌ ಎಂಬ ವಿಟಮಿನ್‌ ಕೂಡಾ ಇರುವ ಕಡ್ಲೆ ಹಿಟ್ಟಿನ ಶೀರ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಇದು ಮಗುವಿನ ಸರ್ವಾಂಗಿಣ ಬೆಳವಣಿಗೆಗೆ ಅತಿ ಅಗತ್ಯ. ಈ ತಿನಿಸಿಗೆ ತುಪ್ಪ ಮತ್ತು ಹಾಲು ಕೂಡಾ ಹಾಕಿರುವುದರಿಂದ ಗರ್ಭಿಣಿಯರಿಗೆ ಇದು ಪೌಷ್ಟಿಕ ಆಹಾರವಾಗಿ ಪರಿಣಮಿಸಿದೆ.

ಹೀಗೆ ಮಾಡಿ 

ಕಡ್ಲೆ ಹಿಟ್ಟಿನ ಶೀರವನ್ನು ತುಂಬಾ ಸುಲಭವಾಗಿ ಮಾಡಬಹುದು. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದರಲ್ಲಿ ಒಂದು ಕಪ್‌ ಕಡ್ಲೆ ಹಿಟ್ಟನ್ನು ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಎರಡು ಕಪ್‌ ಹಾಲು ಹಾಕಿ ಗಂಟಾಗದಂತೆ ಚೆನ್ನಾಗಿ ತಿರುವಿ. ಆಮೇಲೆ ಇದಕ್ಕೆ ಕಾಲು ಟೀ ಸ್ಪೂನ್‌ ಅರಶಿನ ಪುಡಿ, ಕಾಲು ಟೀ ಸ್ಪೂನ್‌ ಕಾಳುಮೆಣಸಿನ ಪುಡಿ, ಒಂದು ಚಿಟಿಕೆ ಏಲಕ್ಕಿ ಪುಡಿ, ನಾಲ್ಕು ಟೀ ಸ್ಪೂನ್‌ ಸಕ್ಕರೆ ಅಥವಾ ಬೆಲ್ಲ ಹಾಕಿ ಚೆನ್ನಾಗಿ ತಿರುವಿ. ಈ ಮಿಶ್ರಣ ದಪ್ಪವಾದಾಗ ಕೆಳಗಿಳಿಸಿ ಬಿಸಿ ಬಿಸಿಯಾಗಿ ಸೇವಿಸಿ.

About the author

ಕನ್ನಡ ಟುಡೆ

Leave a Comment