ರಾಷ್ಟ್ರ ಸುದ್ದಿ

ನ್ಯಾಯಾಂಗದಲ್ಲಿ ಎಸ್‌ಸಿ,ಎಸ್‌ಟಿ ಕೋಟಾ: ಕಾನೂನು ಸಚಿವರ ಪ್ರಸ್ತಾವ

ಲಖನೌ- ಹೊಸದಿಲ್ಲಿ: ಅಖಿಲ ಭಾರತ ನ್ಯಾಯಾಂಗ ಸೇವೆಯಲ್ಲಿ ಯುಪಿಎಸ್‌ಸಿ ಪ್ರವೇಶ ಪರೀಕ್ಷೆ ಮೂಲಕ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟಿನವರಿಗೆ ಹುದ್ದೆಗಳನ್ನು ಮೀಸಲಿಡಬಹುದು; ಆ ಮೂಲಕ ವಂಚಿತ ಸಮುದಾಯದ ಪ್ರತಿಭಾವಂತರ ತಂಡವನ್ನು ಕಟ್ಟಬಹುದು; ನ್ಯಾಯಾಂಗದಲ್ಲಿ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸಬಹುದು ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್  ತಿಳಿಸಿದರು.

ಅಖಿಲ ಭಾರತ ನ್ಯಾಯಾಂಗ ಸೇವೆಗೆ ಪ್ರಾಥಮಿಕ ಹಂತದ ಹುದ್ದೆಗಳಿಗೆ ಪ್ರವೇಶ ಪರೀಕ್ಷೆ ಆಧರಿಸಿ ನೇಮಕ ನಡೆಸಬಹುದು (ಹಿಂದೆ ಈ ಪ್ರಸ್ತಾವವನ್ನು ವಿರೋಧಿಸಲಾಗಿತ್ತು). ಆ ಮೂಲಕ ನ್ಯಾಯಾಂಗದಲ್ಲಿ ಪ್ರಾಥಮಿಕ ಹಂತದಲ್ಲಿ ಎಸ್‌ಸಿ/ಎಸ್‌ಟಿ ಕೋಟಾವನ್ನು ಪರಿಚಯಿಸಬಹುದು ಎಂದು ಪ್ರಸಾದ್ ನುಡಿದರು. ಅಅವರು ಲಖನೌದಲ್ಲಿ ಅಖಿಲ ಭಾರತ ವಕೀಲರ ಮಂಡಳಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

‘ನ್ಯಾಯಾಂಗ ಸೇವೆಗಳ ಪರೀಕ್ಷೆಯನ್ನು ಯುಪಿಎಸ್‌ಸಿ ಮೂಲಕ ನಡೆಸಿದರೆ, ನಾಗರಿಕ ಸೇವೆಗಳ ಹುದ್ದೆಗಳಿಗೆ ನಡೆಸುವ ನೇಮಕಾತಿಯ ವಿಧಾನದಲ್ಲೇ ನ್ಯಾಯಾಂಗ ಹುದ್ದೆಗಳಿಗೂ ಎಸ್‌ಸಿ/ಎಸ್‌ಟಿ ವರ್ಗದವರನ್ನು ನೇಮಿಸಿಕೊಳ್ಳಬಹುದು. ಆಯ್ಕೆಯಾದವರನ್ನು ಅಗತ್ಯವಿರುವ ರಾಜ್ಯಗಳಲ್ಲಿ ಸೇವೆಗೆ ನಿಯೋಜಿಸಬಹುದು. ಈ ಮೀಸಲಾತಿಯಿಂದ ದಮನಿತ ವರ್ಗಗಳ ಪ್ರತಿಭಾವಂತರಿಗೆ ನ್ಯಾಯಾಂಗ ಸೇವೆಗೆ ಪ್ರವೇಶಿಸಲು ಅನುಕೂಲವಾಗುತ್ತದೆ. ಕ್ರಮೇಣ ಅವರು ಪ್ರತಿಭೆಯನ್ನಾಧರಿಸಿ ಬಡ್ತಿ ಪಡೆಯಬಹುದು’ ಎಂದು ಪ್ರಸಾದ್‌ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

ಇತರ ಹಿಂದುಳಿದ ವರ್ಗಗಳಿಗೆ ಮೀಸಲು ನೀಡುವ ಬಗ್ಗೆ ಸಚಿವ ಪ್ರಸಾದ್ ಪ್ರಸ್ತಾಪಿಸಿಲ್ಲ. ಅಖಿಲ ಭಾರತ ಪೌರಸೇವಾ ನೇಮಕಕ್ಕೆ ಯುಪಿಎಸ್‌ಸಿ ಅನುಸರಿಸುವ ಮಾದರಿಯನ್ನೇ ಇಲ್ಲೂ ಅನ್ವಯಿಸಬಹುದು ಎಂದು ಅವರು ವಿವರಿಸಿದರು. ‘ಸುವ್ಯವಸ್ಥಿತ ನ್ಯಾಯಾಂಗ ಸೇವೆಗೆ ನಮ್ಮ ಕಾನೂನು ಶಾಲೆಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೆಳೆಯಬಹುದು. ಜಿಲ್ಲಾ ನ್ಯಾಯಾಧೀಶರ ಮಟ್ಟದ ವರೆಗಿನ ಹುದ್ದೆಗಳಿಗೆ ಯುವ ಪ್ರತಿಭಾವಂತರ ನೇಮಕದಿಂದ ನ್ಯಾಯಾಂಗದಲ್ಲಿ ಬಹಳಷ್ಟು ಬದಲಾವಣೆ ತರಬಹುದು. ಜಿಲ್ಲಾ ನ್ಯಾಯಾಧೀಶರಿಗೆ ಸಹಾಯಕರಾಗಿ ಅವರು ಉತ್ತಮ ಸೇವೆ ನೀಡುವ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚಿನ ವೇಗ ಮತ್ತು ದಕ್ಷತೆ ನೀಡಬಹುದು’ ಎಂದು ಪ್ರಸಾದ್ ನುಡಿದರು.

About the author

ಕನ್ನಡ ಟುಡೆ

Leave a Comment