ಕ್ರೈಂ

ನ್ಯಾಯಾಧೀಶರ ಪತ್ನಿಯ ಕೊಲೆ: ಗನ್‌ಮ್ಯಾನ್‌ನ ‘ಗುರು’ವಿಗೆ ಪೊಲೀಸರ ಬೇಟೆ

ಗುರುಗ್ರಾಮ್‌: ಗುರುಗ್ರಾಮ್‌ ಜಿಲ್ಲಾ ನ್ಯಾಯಾಧೀಶರ ಪತ್ನಿ ಮತ್ತು ಪುತ್ರನನ್ನು ಗುಂಡಿಟ್ಟು ಕೊಲೆ ಮಾಡಿದ ಆರೋಪ ಹೊತ್ತಿರುವ ಹೆಡ್‌ಕಾನ್‌ಸ್ಟೇಬಲ್‌ ಮಹಿಪಾಲ್ ಕೌಟುಂಬಿಕ ಸಮಸ್ಯೆಯಿಂದ ನರಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮಹಿಪಾಲ್‌ ಹರ್ಯಾಣದ ಗಾಯಕಿ – ಕವಯಿತ್ರಿಯೊಬ್ಬರನ್ನು ಮದುವೆಯಾಗಿದ್ದು, ಕಳೆದ ನಾಲ್ಕಾರು ದಿನಗಳಿಂದ ನಿದ್ರೆಯಿಲ್ಲದೆ ಅಸ್ವಸ್ಥನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ನ್ಯಾಯಾಧೀಶ ಕೃಷ್ಣಕಾಂತ್‌ ಅವರ ಪತ್ನಿ ರೀತು ಅವರ ಮೇಲೆ ಗನ್‌ಮ್ಯಾನ್‌ ಮಹಿಪಾಲ್‌ ಭುಜ ಮತ್ತು ಹೊಟ್ಟೆಯ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದ. ತೀವ್ರ ಗಾಯದಿಂದಾಗಿ ಅವರು ಶನಿವಾರ ರಾತ್ರಿ 11:30ಕ್ಕೆ ಮೃತಪಟ್ಟಿದ್ದರು. ಅವರ ಪುತ್ರ ಧ್ರುವನಿಗೂ ತಲೆಯ ಮೇಲೆ ಎರಡು ಗುಂಡೇಟುಗಳು ತಗುಲಿದ್ದು, ‘ಗಂಭೀರ ಪರಿಸ್ಥಿತಿ’ಯಲ್ಲಿದ್ದಾರೆ. ಅವರಿಗೆ ಜೀವರಕ್ಷಕ ಸಾಧನಗಳನ್ನು ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸರು ಘಟನೆಯ ವಿಸ್ತೃತ ವಿಚಾರಣೆ ನಡೆಸಿದ್ದು, 32 ವರ್ಷದ ಆರೋಪಿ ಪಿಎಸ್‌ಓ ಮಾನಸಿಕ ಸ್ಥಿತಿ ಅಸ್ಥಿರವಾಗಿದೆ ಎಂದು ಹೇಳಿದ್ದಾರೆ. ಆತ ಒಬ್ಬ ‘ಗುರು’ ಮತ್ತು ‘ಗುರುಮಾತೆ’ಯ ಪ್ರಭಾವಕ್ಕೆ ಒಳಗಾಗಿದ್ದು, ಈ ದಿಸೆಯಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ. ಯಾವುದೇ ಅಶಿಸ್ತು ಅಥವಾ ಹಿಂಸಾಚಾರದ ಹಿನ್ನೆಲೆಯಿರದ ಪೊಲೀಸ್ ಅಧಿಕಾರಿ ಈ ರೀತಿ ಕೊಲೆ ಮಾಡುವ ವರ್ತನೆ ತೋರಿದ್ದು ಹೇಗೆ ಎಂಬುದರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ನ್ಯಾಯಾಧೀಶರ ಕುಟುಂಬದ ರಕ್ಷಣೆಗಾಗಿಯೇ ನೇಮಕಗೊಂಡಿದ್ದ ಪೊಲೀಸ್ ಸಿಬ್ಬಂದಿ ಜನದಟ್ಟಣೆಯ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕರ ಎದುರಿನಲ್ಲೇ ಗುಂಡುಹಾರಿಸಿ ಕೊಲೆ ಮಾಡಿದ ಘಟನೆಯ ಹಿನ್ನೆಲೆ ಮಾತ್ರ ಕಗ್ಗಂಟಾಗಿಯೇ ಉಳಿದಿದೆ.


ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದು ಹರ್ಯಾಣ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ಸಂಧು ತಿಳಿಸಿದ್ದಾರೆ. ರೀತು ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪುತ್ರ ಧ್ರುವ ಅವರು ಚಿಂತಾಜನಕ ಸ್ಥಿತಿಯಲ್ಲಿ ಇರುವುದರಿಂದ ಅಂತ್ಯಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಪೊಲೀಸರು ಹೇಳಿದರು. ಮಹಿಪಾಲ್‌ನನ್ನು ಪೊಲೀಸರು ನಾಲ್ಕು ದಿನಗಳ ಕಾಳ ಕಸ್ಟಡಿಗೆ ಪಡೆದಿದ್ದಾರೆ. ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, ಸೆಕ್ಷನ್‌ 302 (ಕೊಲೆ), 307 (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಲಾಗಿದೆ.

‘ಆರೋಪಿ ಮಹಿಪಾಲ್‌ಗೆ ಮಾನಸಿಕ ಸಮಸ್ಯೆಗಳಿದ್ದ ಪೂರ್ವನಿದರ್ಶನವಿಲ್ಲ. ಆ ಬಗ್ಗೆ ಚಿಕಿತ್ಸೆ ಪಡೆದುಕೊಂಡಿದ್ದೂ ಇಲ್ಲ. ಆದರೆ ಕೌಟುಂಬಿಕವಾಗಿ ಕೆಲವು ಸಮಸ್ಯೆಗಳಿದ್ದವು. ಅದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು’ ಎಂದು ವಿಶೇಷ ತನಿಖಾ ತಂಡದ ಡಿಸಿಪಿ ಸುಲೋಚನಾ ಗಜರಾಜ್‌ ಟೈಮ್ಸ್‌ ಆಫ್ ಇಂಡಿಯಾಗೆ ತಿಳಿಸಿದರು. ಆದರೆ ಕೊಲೆಗೆ ಒಂದು ದಿನ ಮೊದಲು (ಶುಕ್ರವಾರ) ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ ಒಂದು ವಿಲಕ್ಷಣ ಚಿತ್ರದ ಬಗ್ಗೆ ಪೊಲೀಸರು ಈಗ ತಲೆಕೆಡಿಸಿ ಕೊಳ್ಳುತ್ತಿದ್ದಾರೆ. ನೀಲಿ ಬಣ್ಣದ ಶಾಯಿಯಲ್ಲಿ ‘ಪ್ಯಾಸ್ಟರ್ ರಾಬಿನ್‌’ ಎಂದು ಬರೆಯಲಾದ ಸಂದೇಶದ ಬಗ್ಗೆ ಗಮನಹರಿಸಿದ್ದಾರೆ. ತೌ ದೇವಿ ಲಾಲ್ ಸ್ಟೇಡಿಯಂ ಸಮೀಪದ ಕೋಣೆಯೊಂದಕ್ಕೆ ತನಿಖಾಧೀಕಾರಿಗಳನ್ನು ಮಹಿಪಾಲ್ ಕರೆದೊಯ್ದಿದ್ದು, ಅಲ್ಲಿಂದ ಎರಡು ಪೇಂಟಿಂಗ್‌ ಮತ್ತು ಕೆಲವು ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಧರೆ ಅವುಗಳಲ್ಲಿರುವ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಧಾರ್ಮಿಕ ನಾಯಕ ಇಂದ್ರರಾಜ್ ಸಿಂಗ್‌ ಅವರೇ ಮಹಿಪಾಲ್‌ನ ಗುರು ಆಗಿರಬೇಕೆಂದು ಶಂಕಿಸಲಾಗಿದೆ. ಸಿಐಡಿ ಅಧಿಕಾರಿಗಳ ಪ್ರಕಾರ, ಆಗಸ್ಟ್ 21ರಂದು ಹೋಟೆಲೊಂದಕ್ಕೆ ದಾಳಿ ಮಾಡಿದ್ದ ಅಧಿಕಾರಿಗಳು ಇಂದ್ರರಾಜ್ ಸಿಂಗ್ ಸಹಿತ 8 ಮಂದಿಯನ್ನು ಬಂಧಿಸಿದ್ದರು. ಆದರೆ ನಂತರ ಮಹಿಪಾಲ್‌ ಮಧ್ಯಸ್ಥಿಕೆಯ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು.

About the author

ಕನ್ನಡ ಟುಡೆ

Leave a Comment