ಸಿನಿ ಸಮಾಚಾರ

ಪಂಚಭೂತಗಳಲ್ಲಿ ‘ಅಮರ’ನಾದ ಕಲಿಯುಗ ಕರ್ಣ

ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ರೆಬೆಲ್​ ಸ್ಟಾರ್​ ಅಂಬರೀಷ್​ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಪುತ್ರ ಅಭಿಷೇಕ್​ ಗೌಡ ಸಂಜೆ 5.56ಕ್ಕೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿ ವಿಧಾನ ಪೂರೈಸಿದರು. ವೇದ ಮಂತ್ರಗಳೊಂದಿಗೆ ಖ್ಯಾತ ವೈದಿಕ ಭಾನುಪ್ರಕಾಶ್ ಶರ್ಮಾ ಅವರ ಶಿಷ್ಯಂದಿರು ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಿಕೊಟ್ಟರು.

ವರನಟ ಡಾ. ರಾಜ್​ಕುಮಾರ್ ಸಮಾಧಿ ಪಕ್ಕದಲ್ಲೇ ಅಂಬರೀಷ್ ಅಂತ್ಯಕ್ರಿಯೆ ನಡೆಯಿತು. ಮೂರು ಸುತ್ತು ಕುಶಾಲುತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸಿಎಂ ಎಚ್​ಡಿಕೆ ಅಂಬಿ ಪತ್ನಿ ಸುಮಲತಾ ಅವರಿಗೆ ಹಸ್ತಾಂತರಿಸಿದರು. ಕುಟುಂಬ ಸದಸ್ಯರು, ಚಲನಚಿತ್ರ ನಟ-ನಟಿಯರು, ರಾಜ್ಯ ಸರ್ಕಾರದ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರೆಬೆಲ್ ಸ್ಟಾರ್ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗುವುದನ್ನು ಕಂಡು ಗದ್ಗದಿತರಾದರು. ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದರು. ಸತತ ಮೂರೂವರೆ ಗಂಟೆ 13 ಕಿ.ಮೀ. ಸಾಗಿಬಂದ ಮೆರವಣಿಗೆ ಸಂಜೆ 4 ಗಂಟೆಗೆ ಸ್ಟುಡಿಯೋ ತಲುಪಿತು. ಮಧ್ಯಾಹ್ನ 12.30ಕ್ಕೆ ಕಂಠೀರವ ಸ್ಟುಡಿಯೋದಿಂದ ಮೆರವಣಿಗೆ ಆರಂಭವಾಗಿತ್ತು.

ಇದಕ್ಕೂ ಮೊದಲು ಕಂಠೀರವ ಸ್ಟೇಡಿಯಂ ಹಾಗೂ ಮಂಡ್ಯದ ಸರ್​​ ಎಂ. ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಮಂದಿ ದರ್ಶನ ಮಾಡಿದರು. ಅಂಬರೀಷ್ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಮಹಾಪೂರವೇ ಕಂಠೀರವ ಸ್ಟೇಡಿಯಂಗೆ ಹರಿದುಬಂದಿತ್ತು. ರಾಜ್ಯ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4 ಗಂಟೆಯಿಂದ ಸೋಮವಾರ ಬೆಳಗ್ಗೆ 10 ಗಂಟೆಯವರೆಗೆ ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳು, ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಅಂಬಿ ವಿಕ್ರಮ್​ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅಸುನೀಗಿದ್ದರು.

About the author

ಕನ್ನಡ ಟುಡೆ

Leave a Comment