ರಾಜಕೀಯ

ಪಂಚಮಶಾಲಿ ಶಾಸಕರ ಸೆಳೆಯಲು ಯಡಿಯೂರಪ್ಪ ಮಾಸ್ಟರ್ ಪ್ಲಾನ್!

ಬೆಂಗಳೂರು dರಾಜ್ಯದಲ್ಲಿ ಈ ಬಾರಿ ಜಾತಿ ಧೃವೀಕರಣ ನಡೆಯಲಿದೆ ಎಂಬುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸಿರುವ ನಿದರ್ಶನವೊಂದು ಕಾಂಗ್ರೆಸ್ ಮತ್ತು ಜೆಡಿಎಸ್‍ನ್ನು ನಿದ್ದೆಗೆಡುವಂತೆ ಮಾಡಿದೆ. ಈ ಎರಡೂ ಪಕ್ಷಗಳಲ್ಲಿರುವ ವೀರಶೈವ ಸಮುದಾಯದ ಶಾಸಕರನ್ನು ಸೆಳೆಯಲು ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‍ನ 9 ಮಂದಿ ಹಾಗೂ ಜೆಡಿಎಸ್‍ನ ಓರ್ವ ವೀರಶೈವ ಶಾಸಕರನ್ನು ಬಿಜೆಪಿಗೆ ಕರೆತರಲು ಯಡಿಯೂರಪ್ಪ ಕಾರ್ಯೋನ್ಮುಖರಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ.

ಜೆಡಿಎಸ್‍ನಲ್ಲಿರುವ ಬಸವ ಕಲ್ಯಾಣದ ಮಲ್ಲಿಕಾರ್ಜುನ್ ಕೂಬಾ, ರಾಯಚೂರಿನ ಶಿವರಾಜ್ ಪಾಟೀಲ್, ಕಾಂಗ್ರೆಸ್ ರಾಜಶೇಖರ ಪಾಟೀಲ ಹುಮ್ನಾಬಾದ್, ವಿಜಯ ಕಾಶಪ್ಪನವರ್, ಜಿ.ಟಿ.ಪಾಟೀಲ,ಅಪ್ಪು ಪಟ್ಟಣಶೆಟ್ಟಿ, ಮಾಲೀಕಯ್ಯ ಗುತ್ತೇದಾರ್, ಸತೀಶ್‍ಸೈಲ್, ಕೆಜೆಪಿಯ ಬಿ.ಆರ್.ಪಾಟೀಲ್ ಸೇರಿದಂತೆ ಒಟ್ಟು 12 ಶಾಸಕರನ್ನು ಬಿಜೆಪಿಗೆ ಕರೆತರಲು ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.

+ ಪಂಚಮಸಾಲಿಗಳ ಟಾರ್ಗೆಟ್:

ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಪಂಚಮಸಾಲಿ ಸಮುದಾಯದ ವೀರಶೈವ ಶಾಸಕರ ಜೊತೆ ಬಿಎಸ್‍ವೈ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕರಾವಳಿ ಭಾಗದ ಸಂಸದರೊಬ್ಬರು ಒಬ್ಬೊಬ್ಬ ಶಾಸಕರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತಿದ್ದು, ಪಕ್ಷಕ್ಕೆ ಬಂದರೆ ಟಿಕೆಟ್ ನೀಡುವುದು, ಚುನಾವಣಾ ಖರ್ಚು-ವೆಚ್ಚದ ಜೊತೆಗೆ ಮಂತ್ರಿ ಸ್ಥಾನದ ಆಶ್ವಾಸನೆಯನ್ನು ಕೊಡಲಾಗಿದೆ. ಕಳೆದ 10 ದಿನಗಳಿಂದ ಒಬ್ಬೊಬ್ಬ ಶಾಸಕರ ಜೊತೆ ಪ್ರತ್ಯೇಕವಾಗಿ ಯಡಿಯೂರಪ್ಪ ಮಾತುಕತೆ ನಡೆಸಿದ್ದು, ಶಾಸಕರಿಂದಲೂ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿದೆ ಎನ್ನಲಾಗಿದೆ. ಇದೇ 11 ರಂದು ಉತ್ತರ ಪ್ರದೇಶ, ಉತ್ತರಖಂಡ್, ಮಣಿಪುರ, ಗೋವಾ, ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ಒಂದು ವೇಳೆ ಈ ಫಲಿತಾಂಶ ಬಿಜೆಪಿ ಪರವಾಗಿ ಬಂದರೆ ಶಾಸಕರು ಪಕ್ಷ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

500 ಹಾಗೂ 1000 ಮುಖಬೆಲೆಯ ನೋಟು ಅಮಾನೀಕರಣಕ್ಕೆ ಈ ಐದೂ ರಾಜ್ಯಗಳ ಫಲಿತಾಂಶ ಸಾಕ್ಷಿಯಾಗಲಿದೆ. ಹಾಗೊಂದು ವೇಳೆ ಬಿಜೆಪಿ ಎಲ್ಲರ ನಿರೀಕ್ಷೆಯನ್ನು ತಲೆಕೆಳಗೆ ಮಾಡಿ ಗೆದ್ದರೆ ದೇಶದಲ್ಲಿ ಇನ್ನು ಮೋದಿ ಅಲೆ ಇದೆ ಎಂಬುದು ರುಜುವಾತಾಗಲಿದೆ. ಈಗಾಗಲೇ ಒಂದಲ್ಲೊಂದು ವಿವಾದಗಳಿಂದ ಕಾಂಗ್ರೆಸ್‍ಗೆ ಆಡಳಿತ ವಿರೋಧಿ ಅಲೆ ಉಂಟಾಗಿದೆ. ಹೈಕಮಾಂಡ್‍ಗೆ ಕಪ್ಪ ಕಾಣಿಕೆ ನೀಡಿರುವುದು ಡೈರಿಯಲ್ಲಿ ಬಹಿರಂಗಗೊಂಡಿದ್ದು, ಕೆಲವರನ್ನು ಪಕ್ಷದಲ್ಲಿ ಕಡೆಗಣಿಸಿದ್ದು, ಮಂತ್ರಿ ಸ್ಥಾನ ವಂಚಿತರು ಬಿಜೆಪಿಯತ್ತ ಮುಖ ಮಾಡಿದ್ದಾರೆ.

+ ಮಠಾಧೀಶರ ಮೇಲೆ ಒತ್ತಡ:

ಇನ್ನು ಯಡಿಯೂರಪ್ಪ ಮಠಾಧೀಶರಿಂದಲೂ ಶಾಸಕರ ಮೇಲೆ ಒತ್ತಡ ತಂತ್ರ ಅನುಸರಿಸಿದ್ದಾರೆ. ಶತಾಯಗತಾಯ ರಾಜ್ಯದಲ್ಲಿ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರಲೇಬೇಕು. ಜಾತಿಗಣತಿಯಲ್ಲಿ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅಲ್ಲದೆ, ಸಿದ್ದರಾಮಯ್ಯ ಸಂಪುಟದಲ್ಲಿ ವೀರಶೈವರಿಗೆ ಸ್ಥಾನಮಾನ ಇಲ್ಲದಂತಾಗಿದೆ. ಹಿರಿಯರಾದ ಶ್ಯಾಮನೂರು ಶಿವಶಂಕರಪ್ಪ, ಎಸ್.ಆರ್.ಪಾಟೀಲ್ ಅಂತಹವರಿಗೆ ಸೂಕ್ತವಾದ ಗೌರವಾದರಗಳು ಸಿಗುತ್ತಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಪಕ್ಷವನ್ನು ಅಧಿಕಾರಕ್ಕೆ ತರಬಹುದು. ಹೀಗಾಗಿ ಬಿಜೆಪಿಗೆ ಬಂದರೆ ಹೆಚ್ಚಿನ ಶಕ್ತಿ ಬರುತ್ತದೆ. ನಿಮ್ಮ ಗೆಲುವಿನ ಹೊಣೆಗಾರಿಕೆಯನ್ನು ನನಗೆ ನೀಡಿ ಎಂದು ಭರವಸೆ ನೀಡಿದ್ದಾರೆ. ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿರುವ ಶಾಸಕರು ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲವಾದರೂ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

+ ಕಾಂಗ್ರೆಸ್ ಹೈಅಲರ್ಟ್:

ಇತ್ತ ತಮ್ಮ ಪಕ್ಷದ ಶಾಸಕರು ಕೈ ಕೊಡುವುದು ಖಚಿತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್, ಜಿಲ್ಲಾಧ್ಯಕ್ಷರಿಗೆ ಶಾಸಕರ ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿಡುವಂತೆ ಸೂಚಿಸಿದೆ.
ಶಾಸಕರಿಂದ ಪಕ್ಷ ಬಿಡುವ ಸುಳಿವು ಸಿಗುತ್ತಿದ್ದಂತೆ ತಕ್ಷಣಕ್ಕೆ ಕೆಪಿಸಿಸಿ ಗಮನಕ್ಕೆ ತರಬೇಕು ಎಂದು ಆದೇಶಿಸಲಾಗಿದೆ.

About the author

ಕನ್ನಡ ಟುಡೆ

Leave a Comment