ರಾಜ್ಯ ಸುದ್ದಿ

ಪಂಚರಾಜ್ಯ ಚುನಾವಣೆ ಫಲಿತಾಂಶ ಎಫೆಕ್ಟ್‌: ರಾಜ್ಯ ಬಿಜೆಪಿ ನಾಯಕರಿಗೆ ತುರ್ತು ದಿಲ್ಲಿ ಬುಲಾವ್‌

ಬೆಳಗಾವಿ: ಪಂಚರಾಜ್ಯಗಳ ಚುನಾವಣೆ ಸೋಲಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈಕಮಾಂಡ್‌ ಎಲ್ಲ ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಮುಂದಾಗಿದ್ದು, ಗುರುವಾರ ದಿಲ್ಲಿಯಲ್ಲಿ ನಡೆಯುವ ಸಭೆಗೆ ಹಾಜರಾಗುವಂತೆ ರಾಜ್ಯ ಮುಖಂಡರಿಗೆ ಬುಲಾವ್‌ ನೀಡಿದೆ.

ಲೋಕಸಭೆ ಚುನಾವಣೆ ಸಿದ್ಧತೆ ದೃಷ್ಟಿಯಿಂದ ಪಕ್ಷ ದಲ್ಲಿ ಕೆಲ ಬದಲಾವಣೆ ಹಾಗೂ ಸಂಘಟನೆ ಬಲಪಡಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ರಾಜ್ಯ ವಕ್ತಾರ ಸಿ.ಟಿ.ರವಿ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್‌ ರಾವ್‌ ಅವರಿಗೆ ಕರೆ ನೀಡಲಾಗಿದೆ. ಆದರೆ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕರೂ ಆಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ದಿಲ್ಲಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದು ಬಿಎಸ್‌ವೈ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ವರಿಷ್ಠರ ಒಪ್ಪಿಗೆಯನ್ನೂ ಪಡೆದುಕೊಂಡಿದ್ದಾರೆ. ಹಾಗಾಗಿ ಉಳಿದ ನಾಲ್ವರು ದಿಲ್ಲಿಗೆ ತೆರಳಲಿದ್ದಾರೆ.

4 ವರ್ಷದಲ್ಲಿ ಇದೇ ಮೊದಲು : ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಸಂಘಟನೆ ದೃಷ್ಟಿಯಿಂದ ಎಲ್ಲ ರಾಜ್ಯಗಳ ಮುಖಂಡರಿಗೆ ತುರ್ತು ಬುಲಾವ್‌ ನೀಡಿರುವುದು ಇದೇ ಮೊದಲು. ಆಯಾ ರಾಜ್ಯಗಳಲ್ಲಿ ಬದಲಾಗುತ್ತಿರುವ ಟ್ರೆಂಡ್‌ ಹಾಗೂ ಪಕ್ಷ ದ ನೀತಿಯಲ್ಲಿ ಬದಲಾವಣೆ ಅಗತ್ಯವೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಪ್ರಾಸ್ತಾವಿಕ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

ದೋಸ್ತಿಗಳ ಸಂಪರ್ಕದಲ್ಲಿ ಐವರು ಬಿಜೆಪಿ ಶಾಸಕರು : ಕಾಂಗ್ರೆಸ್‌ ಶಾಸಕರನ್ನು ತನ್ನೆಡೆಗೆ ಸೆಳೆಯುವ ಆಪರೇಷನ್‌ ಕಮಲ ರಾಜ್ಯದಲ್ಲಿ ನಡೆಯುತ್ತಿದೆ ಎಂಬ ಸುದ್ದಿಯ ಮಧ್ಯೆಯೇ ಬಿಜೆಪಿಯ ಐವರು ಶಾಸಕರನ್ನು ಮೈತ್ರಿ ಸರಕಾರದ ಪ್ರತಿನಿಧಿಗಳು ಸಂಪರ್ಕ ಮಾಡಿದ್ದಾರೆಂಬ ಸಂಗತಿ ಈಗ ಬಯಲಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಸಂದರ್ಭದಲ್ಲಿ ಈ ಸುದ್ದಿ ಗಾಢವಾಗಿ ಹರಡಿದೆ. ಬಿಜೆಪಿಯ ಐವರು ಶಾಸಕರ ಜತೆಗೆ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಕಮಲ ಪಾಳಯದಲ್ಲಿ ಬಲವಾಗಿ ಹರಿದಾಡುತ್ತಿದ್ದು, ಆ ಶಾಸಕರ ಮೇಲೆ ಒಂದು ಕಣ್ಣಿಡಲಾಗಿದೆ.

ನಮ್ಮ ಶಾಸಕರು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಜತೆಗೆ ಸಂಪರ್ಕದಲ್ಲಿದ್ದಾರೆ ಎಂಬುದು ನಮಗೂ ಗೊತ್ತು. ಆದರೆ ಈಗಿನ ಅತಂತ್ರ ಸ್ಥಿತಿಯಲ್ಲಿ ಅವರು ಪಕ್ಷ ತ್ಯಜಿಸುತ್ತಾರೆಂದು ನಾವೇನು ಭಾವಿಸಿಲ್ಲ. ಲೋಕಸಭಾ ಚುನಾವಣೆ ಬಳಿಕ ಏನು ಬೇಕಾದರೂ ಆಗಬಹುದೆಂಬ ಭಯಕ್ಕೆ ಪಕ್ಷಾಂತರ ಮಾಡುವ ಸಾಧ್ಯತೆ ಕಡಿಮೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment