ರಾಜಕೀಯ

ಪಂಚರಾಜ್ಯ ಸಮರ: ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ, ಹಾಲಿ 80 ಶಾಸಕರಿಗೆ ಕೊಕ್‌

ಭೋಪಾಲ್‌: ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿಯು ವಿಧಾನಸಭೆ ಚುನಾವಣೆ ಗೆಲ್ಲಲು ಹೊಸ ತಂತ್ರ ಹೆಣೆದಿದೆ. ರಾಜ್ಯದಲ್ಲಿ ಭಾರಿ ಹಿನ್ನಡೆಯಾಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಕ್ಷವು ಈ ಬಾರಿ ಹಾಲಿ 70 ರಿಂದ 80 ಶಾಸಕರನ್ನು ಹೊರಗಿಟ್ಟು ಹೊಸ ಮುಖಗಳಿಗೆ ಟಿಕೆಟ್‌ ನೀಡಲು ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿವೆ.

ನವೆಂಬರ್‌ 28 ರಂದು ಚುನಾವಣೆ ನಡೆಯಲಿದೆ. 15 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ ಈ ಬಾರಿಯೂ ಅಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನಾಯಕತ್ವದ ಬಗ್ಗೆ ಅಷ್ಟೇನೂ ಅಸಮಾಧಾನವಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನಕೊಡದೇ ನಿರ್ಲಕ್ಷ್ಯ ತೋರಿದ ಶಾಸಕರ ಬಗ್ಗೆ ಜನರಲ್ಲಿ ಅತೃಪ್ತಿ ಇದೆ. ”ಇಂತಹ ಶಾಸಕರು ನಮಗೆ ಬೇಕಾಗಿಲ್ಲ, ಅವರನ್ನು ಈ ಬಾರಿ ಸೋಲಿಸಿಬಿಡೋಣ,” ಎಂಬಂತಹ ಮಾತುಗಳು ಕೇಳಿಬರುತ್ತಿವೆ. ‘ಜನ ಆಶೀರ್ವಾದ ಯಾತ್ರೆ’ ವೇಳೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಇಂತಹ ಸೋಮಾರಿ ಶಾಸಕರ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಸುಮಾರು 70ರಿಂದ 80 ಹಾಲಿ ಶಾಸಕರನ್ನು ಹೊರಗಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲು ಚಿಂತನೆ ನಡೆಸಿದೆ.

ಹಿಂದೆಯೂ ನಡೆದಿತ್ತು: 2013ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ 25 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಶೇಕಡ 75ರಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರಿಗೆ ಆದ್ಯತೆ ನೀಡಿದಲ್ಲಿ 150ರ ಗಡಿದಾಟಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. 2013ರ ಚುನಾವಣೆಯಲ್ಲಿ 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 165, ಕಾಂಗ್ರೆಸ್‌ 58 ಸ್ಥಾನಗಳನ್ನು ಗೆದ್ದಿತ್ತು.

About the author

ಕನ್ನಡ ಟುಡೆ

Leave a Comment