ರಾಷ್ಟ್ರ ಸುದ್ದಿ

ಪಂಚ ರಾಜ್ಯ ಚುನಾವಣೆ: 3 ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ, ತೆಲಂಗಾಣದಲ್ಲಿ ಗದ್ದುಗೆಯತ್ತ ಟಿಆರ್ ಎಸ್

ನವದೆಹಲಿ: ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಈವರೆಗಿನ ಫಲಿತಾಂಶದ ಅನ್ವಯ ಒಟ್ಟು ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು, ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ಮಿಜೋರಾಂನಲ್ಲಿ ಎಂಎನ್ಎಫ್ ಗದ್ದುಗೆ ಹಿಡಿಯುವತ್ತ ಹೆಜ್ಜೆ ಹಾಕಿವೆ. ಮಧ್ಯ ಪ್ರದೇಶದಲ್ಲಿ 230 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 112 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದತ್ತ ಹೆಜ್ಜೆಹಾಕಿದೆ. ಆದರೆ ಆಡಳಿತಾ ರೂಢ ಬಿಜೆಪಿ ಪಕ್ಷ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಬಿಜೆಪಿ 97 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ ಬಿಎಸ್ ಪಿ 4 ಕ್ಷೇತ್ರಗಳಲ್ಲಿ ಮತ್ತು ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ರಾಜಸ್ಥಾನದಲ್ಲೂ ಇದೇ ಪರಿಸ್ಥಿತಿ ಇದ್ದು, ರಾಜಸ್ಥಾನದ ಒಟ್ಟು 199 ಕ್ಷೇತ್ರಗಳ ಪೈಕಿ 101ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ 80 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿಯೂ ಬಿಎಸ್ ಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರರು 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ ಛತ್ತೀಸ್ ಘಡದಲ್ಲೂ ಕಾಂಗ್ರೆಸ್ ನಗೆ ಬೀರಿದ್ದು, ಇಲ್ಲಿನ ಒಟ್ಟು 90 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 53 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 26 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಬಿಎಸ್ ಪಿ ಮೈತ್ರಿಕೂಟ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಇತ್ತ ತೆಲಂಗಾಣದಲ್ಲಿ ಟಿಆರ್ ಎಸ್ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದ್ದು, ಈ ಬಾರಿಯೂ ಸಿಎಂ ಚಂದ್ರಶೇಖರರಾವ್ ಅವರ ಸರ್ಕಾರ ಮುಂದುವರೆಯುವುದು ಸ್ಪಷ್ಟವಾಗಿದೆ. ತೆಲಂಗಾಣದ ಒಟ್ಟು 119 ಕ್ಷೇತ್ರಗಳ ಪೈಕಿ ಟಿಆರ್ ಎಸ್ 82 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದತ್ತ ಹೆಜ್ಜೆ ಹಾಕಿದೆ. ಟಿಆರ್ ಎಸ್ ಸ್ಪರ್ಧೆ ನೀಡುತ್ತಿರುವ ಕಾಂಗ್ರೆಸ್ ಮೈತ್ರಿಕೂಟ 25 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇಲ್ಲಿ ಬಿಜೆಪಿ  ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಇನ್ನು ಮಿಜೋರಾಂನಲ್ಲಿ ಎಂಎನ್ಎಫ್ ಪಕ್ಷ ಅಧಿಕಾರ ರಚನೆಯತ್ತ ದಾಪುಗಾಲಿರಿಸಿದ್ದು, ಇಲ್ಲಿ 40 ಕ್ಷೇತ್ರಗಳ ಪೈಕಿ ಎಂಎನ್ಎಫ್ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರತಿಪಕ್ಷ ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 1 ಮತ್ತು ಇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

About the author

ಕನ್ನಡ ಟುಡೆ

Leave a Comment