ರಾಷ್ಟ್ರ ಸುದ್ದಿ

ಪತಿಯನ್ನು ಕೊಂದವರಿಗೆ ಅದೇ ಗತಿಯಾಗಬೇಕು: ಹತ ಇನ್ಸ್‌ಪೆಕ್ಟರ್‌ ಪತ್ನಿ

ಲಕ್ನೋ : “ನನ್ನ ಪತಿಗೆ ಆದ ಗತಿಯನ್ನೇ ಅವರನ್ನು ಕೊಂದವರಿಗೆ ಆಗುವುದನ್ನು ನಾನು ಕಾಣಲು ಬಯಸುತೇನೆ; ಆಗ ಮಾತ್ರವೇ ನಮ್ಮ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗುತ್ತದೆ” ಎಂದುಬುಲಂದ್‌ಶಹರ್‌ ಹಿಂಸೆಯಲ್ಲಿ ನಿನ್ನೆ ಸೋಮವಾರ ಉದ್ರಿಕ್ತ ಸಮೂಹದಿಂದ ಕೊಲ್ಲಲ್ಪಟ್ಟಿದ್ದ ಉತ್ತರ ಪ್ರದೇಶ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಅವರ ಪತ್ನಿ, ದುಃಖತಪ್ತರಾಗಿ ಹೇಳಿದ್ದಾರೆ.

“ನನ್ನ ಪತಿ ಓರ್ವ ಪೊಲೀಸ್‌ ಅಧಿಕಾರಿಯಾಗಿ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಕರ್ತವ್ಯದಲ್ಲಿ ಎಲ್ಲ ಜವಾಬ್ದಾರಿಗಳನ್ನು ತಾವೇ ವಹಿಸಿಕೊಳ್ಳುತ್ತಿದ್ದರು. ನನ್ನ ಪತಿಯ ಮೇಲೆ ದಾಳಿಯಾಗಿರುವುದು ಇದೇ ಮೊದಲಲ್ಲ; ಈ ಬಾರಿ ಕರ್ತವ್ಯ ನಿರ್ವಸಿಸುತ್ತಲೇ ಅವರು ತಮ್ಮನ್ನು ಬಲಿದಾನ ನೀಡಿದರು; ಆದರೆ ಅವರಿಗೆ ಮಾತ್ರ ಯಾರೂ ಈಗ ನ್ಯಾಯ ನೀಡುತ್ತಿಲ್ಲ’ ಎಂದು ಸಿಂಗ್‌ ಅವರ ಪತ್ನಿ ಗದ್ಗದಿತರಾಗಿ ಹೇಳಿದರು.

“ನನ್ನ ತಂದೆ ನಾನು ಯಾವತ್ತೂ ಧರ್ಮದ ಹೆಸರಲ್ಲಿ  ಸಮಾಜದಲ್ಲಿ ಹಿಂಸೆಯನ್ನು ಪ್ರಚೋದಿಸದೆ ಒಳ್ಳೆಯ ನಾಗರಿಕನಾಗಬೇಕು ಎಂದು ಹೇಳುತ್ತಿದ್ದರು. ನನ್ನ ತಂದೆ ಈಗ ಹಿಂದು-ಮುಸ್ಲಿಂ ವಿವಾದದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮುಂದಿನ ಸರದಿ ಯಾವ ತಂದೆಯದ್ದು ?’ ಎಂದು ಸಿಂಗ್‌ ಅವರ ಪುತ್ರ ಅಭಿಷೇಕ್‌ ದುಃಖತಪ್ತರಾಗಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

“ನನ್ನ ಸಹೋದರನಿಗೆ ಸರಕಾರ ಹುತಾತ್ಮ ಸ್ಥಾನಮಾನ ನೀಡಬೇಕು; 2015ರಲ್ಲಿ ದಾದ್ರಿಯಲ್ಲಿ ಮೊಹಮ್ಮದ್‌ ಅಖಲಾಕ್‌ ಅವರನ್ನು ಚಚ್ಚಿ ಕೊಂದ ಪ್ರಕರಣದ ತನಿಖೆ ನಡೆಸಿದ್ದ ನನ್ನ ಸಹೋದರನ ಹತ್ಯೆಗೆ ಪೊಲೀಸರು ಸಂಚು ನಡೆಸಿದ್ದಾರೆ’ ಎಂದು ಮೃತ ಇನ್ಸ್‌ಪೆಕ್ಟರ್‌ ಸುಬೋಧ್‌ ಅವರ ಸಹೋದರಿ ಸುನೀತಾ ಸಿಂಗ್‌ ಹೇಳಿದರು.

About the author

ಕನ್ನಡ ಟುಡೆ

Leave a Comment