ಕ್ರೈಂ

ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದು ವಾಗ್ಮೋರೆ: ಎಫ್ಎಸ್ಎಲ್ ವರದಿಯಿಂದ ದೃಢ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದು ಪರಶುರಾಮ್ ವಾಗ್ಮೋರೆಯೇ ಎಂಬುದನ್ನು ಎಫ್ಎಸ್ಎಲ್ ವರದಿ ದೃಢಪಡಿಸಿದೆ. ಗೌರಿ ಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಘಟನಾ ಸ್ಥಳದಲ್ಲಿ ದೊರಕಿದ್ದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಘಟನೆಯ ಮರುಸೃಷ್ಟಿಯ ವಿಡಿಯೋಗಳನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದರು. ಎಲ್ಲವನ್ನು ಪರಿಶೀಲನೆ ನಡೆಸಿರುವ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರರು ವಾಗ್ಮೋರೆಯೇ ಗುಂಡಿಟ್ಟು ಹತ್ಯೆ ಮಾಡಿದ್ದಾನೆಂಬುದನ್ನು ದೃಢಪಡಿಸಿದೆ ಎಂದು ತಿಳಿದುಬಂದಿದೆ. ಗೌರಿ ಅವರನ್ನು ಹತ್ಯೆ ಮಾಡಿದ್ದನ್ನು ಸ್ವತಃ ವಾಗ್ಮೋರೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಆದರೆ, ಎಸ್ಐಟಿ ವಸ್ತು ಸಾಕ್ಷಿಗಾಗಿ ಎಫ್ಎಸ್ಎಲ್ ವರದಿಯ ಮೊರೆ ಹೋಗಿತ್ತು. ಗೌರಿ ಹತ್ಯೆಯಾದ ಸಂದರ್ಭದಲ್ಲಿ ಸ್ಥಳದಲ್ಲಿ ಮೂವರು ಕಟ್ಟಡ ನಿರ್ಮಾಣದ ಕಾರ್ಮಿಕರು ಹಾಗೂ ರಾಯಚೂರು ಮೂಲದ ಓರ್ವ ಪತ್ರಿಕೋದ್ಯಮ ವಿದ್ಯಾರ್ಥಿ ಇರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿತ್ತು. ಈ ವೇಳೆ ಶಸ್ತ್ರಾಸ್ತ್ರಗಳನ್ನು ಹಿಡಿದು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಹಂತಕರು, ಗೌರಿ ಅವರಿಗಾಗಿ ಕಾದು ರಸ್ತೆಯಲ್ಲಿ ನಿಂತಿದ್ದರು. ಹಂತರು ರಸ್ತೆಯಲ್ಲಿದ್ದ ಜನರತ್ತ ತಿರುಗಿ ನೋಡಿದ್ದರು. ಈ ವೇಳೆ ಪ್ರತ್ಯದರ್ಶಿಗಳು ಹಂತಕರನ್ನು ಹೆಲ್ಮೆಟ್ ಇಲ್ಲದೆಯೇ ನೋಡಿದ್ದರು. ನಾಲ್ವರು ಪ್ರತ್ಯಕ್ಷದರ್ಶಿಗಳು ಹಾಗೂ ಓರ್ವ ಅಂಗಡಿ ಮಾಲೀಕನ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ಶಂಕಿತರ ಚಿತ್ರಗಳನ್ನು ಸಿದ್ಧಪಡಿಸಲಾಗಿತ್ತು. ಇದರಂತೆ ಬಂಧನಕ್ಕೊಳಗಾದ ವ್ಯಕ್ತಿಗಳೊಂದಿಗೆ ಈ ಚಿತ್ರ ಹೋಲಿಕೆಯಾಗುತ್ತಿದ್ದವು. ಹಂತಕರನ್ನು ನಿಲ್ಲಿಸಿ ಪರೇಡ್ ನಡೆಸಿದ್ದಾಗ ವಿದ್ಯಾರ್ಥಿ ಹಾಗೂ ಅಂಗಡಿ ಮಾಲೀಕ ಆರೋಪಿಗಳನ್ನು ಗುರುತು ಹಿಡಿದಿದ್ದರು. ಇದಲ್ಲದೆ, ಗೌರಿ ಹತ್ಯೆಯಾದ ಬಳಿಕ ಪರಶುರಾಮ್ ವಾಗ್ಮೋರೆ ಹಾಗೂ ಪ್ರಮುಖ ಆರೋಪಿ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಸೀಗೇಹಳ್ಳಿಯಲ್ಲಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದರು. ಮನೆ ಮಾಲೀಕ ಕೂಡ ವಾಗ್ಮೋರೆ ಹಾಗೂ ಪ್ರವೀಣ್’ನನ್ನು ಗುರುತು ಹಿಡಿದಿದ್ದರು.
ಇನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗೌರಿ ಅವರಿಗೆ ಗುಂಡು ಹಾರಿಸಿದ್ದ ವ್ಯಕ್ತಿಯ ಉದ್ದ 5 ಅಡಿ 2 ಇಂಟುಗಳಷ್ಟಿದ್ದು, ವಾಗ್ಮೋರೆ ಎತ್ತರ ಹಂತಕನ ಎತ್ತರ ಹೋಲಿಕೆಯಾಗುತ್ತಿರುವುದಾಗಿ ಎಫ್ಎಸ್ಎಲ್ ವರದಿಯಲ್ಲಿ ತಿಳಿಸಿದೆ. ಗೌರಿ ಅವರಿಗೆ ಗುಂಡಿ ಹಾರಿಸಿದ್ದು ವಾಗ್ಮೋರೆ ಎಂಬುದು ಇದೀಗ ಖಚಿತವಾಗಿದ್ದು, ಗುಂಡುಗಳ ಕುರಿತ ವರದಿಗಳಿಗಾಗಿ ಎಸ್ಐಟಿ ಕಾದು ಕುಳಿತಿದೆ.

About the author

ಕನ್ನಡ ಟುಡೆ

Leave a Comment