ಕ್ರೈಂ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: 14 ಮಂದಿ ಬಂಧನ

ಬೆಂಗಳೂರು: ಇಂದಿಗೆ ಸರಿಯಾಗಿ ಒಂದು ವರ್ಷ, ಸೆಪ್ಟೆಂಬರ್ 5, 2017ರಂದು ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ದೇಹದೊಳಗೆ ನಾಲ್ಕು ಗುಂಡುಗಳು ಒಳಹೊಕ್ಕಿದ್ದವು. ಸ್ಥಳದಲ್ಲಿಯೇ ಕುಸಿದುಬಿದ್ದ ಗೌರಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಹತ್ಯೆಯ ನಂತರ ನಡೆದ ತನಿಖೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಸುಮಾರು 14 ಮಂದಿಯನ್ನು ಬಂಧಿಸಲಾಗಿದೆ. ಸುಮಾರು 23 ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ಸರ್ಕಾರಕ್ಕೆ ತನ್ನ ಅಧಿಕೃತ ವರದಿಯನ್ನು ಸಲ್ಲಿಸಬೇಕಾಗಿದೆ.ಗೌರಿ ಹತ್ಯೆ ಸಂದರ್ಭದಲ್ಲಿ ಅವರ ಮನೆಯ ಸುತ್ತಮುತ್ತ ಇದ್ದ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ವಶಪಡಿಸಿಕೊಂಡಿರುವ ಪೊಲೀಸರಿಗೆ ಹತ್ಯೆಗೆ ಮುನ್ನ ಇಬ್ಬರು ಬೈಕ್ ನಲ್ಲಿ ಕಪ್ಪು ಜಾಕೆಟ್ ಮತ್ತು ಹೆಲ್ಮೆಟ್ ಧರಿಸಿಕೊಂಡು ಬಂದಿದ್ದರು ಎಂಬ ಅಂಶ ಸಿಕ್ಕಿದೆ.

ಅದರಲ್ಲಿ ಒಬ್ಬ ಗೌರಿಯೆಡೆಗೆ ಬುಲೆಟ್ ಹಾರಿಸಿದ್ದರೆ ಮತ್ತೊಬ್ಬ ಬೈಕ್ ಬಳಿ ನಿಂತಿಕೊಂಡು ಕಾಯುತ್ತಿದ್ದ. ಈ ದೃಶ್ಯಗಳನ್ನು ಹಿಡಿದುಕೊಂಡು ಕರ್ನಾಟಕ ಪೊಲೀಸರು ಮತ್ತು ವಿಶೇಷ ತನಿಖಾಧಿಕಾರಿಗಳು ಪ್ರಕರಣವನ್ನು ಭೇದಿಸುತ್ತಾ ಹೋಗಿ ಇದೀಗ 14 ಮಂದಿಯನ್ನು ಬಂಧಿಸುವವರೆಗೆ ಬಂದು ನಿಂತಿದೆ.ಗೌರಿ ಹತ್ಯೆಗೆ ನಿಖರ ಕಾರಣವೇನು ಎಂದು ಇದುವರೆಗೆ ಗೊತ್ತಾಗಿಲ್ಲ, ಯಾವುದಾದರೂ ವೃತ್ತಿಪರ ಅಥವಾ ವೈಯಕ್ತಿಕ ದ್ವೇಷ, ವೈಷಮ್ಯಗಳಿದ್ದಿರಬಹುದೇ ಎಂದು ತನಿಖೆ ಮಾಡಲು ಹೊರಟಾಗ ಪೊಲೀಸರಿಗೆ ಅಂತಹ ಯಾವುದೇ ಕಾರಣಗಳು ಕಂಡುಬರಲಿಲ್ಲ. ಆಗ ಸುಮಾರು 200 ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ಬಲಪಂಥೀಯ ಸಂಘಟನೆಗಳ ಜಾಡು ಹಿಡಿದು ಹೊರಟರು. ಸಾಹಿತಿ ಎಂ,ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಸಾಮ್ಯತೆ ಇದೆಯೇ ಎಂದು ಪತ್ತೆ ಹಚ್ಚಲು ಮುಂದಾದರು. 

ಕಲಬುರ್ಗಿ ಹತ್ಯೆ ಕೇಸಿನ ವಿಚಾರಣೆ ನಡೆಸುವ ಸಿಐಡಿ ತಂಡಕ್ಕೆ ಬಲಪಂಥೀಯ ಸಂಘಟನೆಗಳ ಪಟ್ಟಿಯನ್ನು ನೀಡುವಂತೆ ಸೂಚಿಸಲಾಯಿತು. ಈ ಪಟ್ಟಿಯಲ್ಲಿ 300ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಅವರಲ್ಲಿ ಬಹುತೇಕರು ಶ್ರೀರಾಮ ಸೇನೆ, ಸನಾತನ ಸಂಸ್ಥ, ಹಿಂದೂ ಜನಜಾಗೃತಿ ಸಮಿತಿಯವರಾಗಿದ್ದು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದವರಾಗಿದ್ದಾರೆ. ಇದರ ಕೊಂಡಿಯನ್ನೇ ಭೇದಿಸಹೊರಟ ಅಧಿಕಾರಿಗಳಿಗೆ ಗೌರಿ, ಕಲಬುರ್ಗಿ, ನರೇಂದ್ರ ದಾಬೋಲ್ಕರ್ ಮತ್ತು ಲೇಖಕ ಗೋವಿಂದ ಪನ್ಸರೆ ಹತ್ಯೆಯಲ್ಲಿ ಸಂಬಂಧವಿರ ಬಗ್ಗೆ ಸಂಶಯ ಬಂತು.ನಾವು ಸುಮಾರು 1.5 ಕೋಟಿ ಫೋನ್ ಕರೆಗಳನ್ನು ಪರಿಶೀಲಿಸಿದೆವು. ಆದರೆ ಯಾವುದೇ ಮಾಹಿತಿ ಸಿಗಲಿಲ್ಲ.

ಆಗ ಗೌರಿ ಹತ್ಯೆಗೆ ಮುನ್ನ ಮೊಬೈಲ್ ಬಳಸಲಿಲ್ಲ ಎಂಬುದು ಖಾತ್ರಿಯಾಯಿತು. ಆ ಸಂದರ್ಭದಲ್ಲಿ ಸುತ್ತಮುತ್ತಲು ಮಾಡಿದ ಫೋನ್ ಕರೆಗಳು ಒಂದು ಪ್ರಮುಖ ಸುಳಿವು ನೀಡಿತು. ನವೆಂಬರ್ 2017ರಲ್ಲಿ ಕೆ ಟಿ ನವೀನ್ ಕುಮಾರ್ ಮತ್ತು ಆತನ ಸ್ನೇಹಿತನ ಮಧ್ಯೆ ನಡೆದ ಸಂಭಾಷಣೆಯನ್ನು ಪರಿಶೀಲಿಸಿದೆವು. ಗೌರಿ ಹತ್ಯೆ ನಂತರ ತಲೆಮರೆಸಿಕೊಂಡಿದ್ದೆ ಎಂದು ತನಿಖೆ ವೇಳೆ ಆತ ಒಪ್ಪಿಕೊಂಡಿದ್ದಾನೆ ಎನ್ನುತ್ತಾರೆ ವಿಶೇಷ ತನಿಖಾ ತಂಡದ ಅಧಿಕಾರಿ. ನವೆಂಬರ್ ಮಧ್ಯಭಾಗದಿಂದ ಅವನ ಚಟುವಟಿಕೆ ಮತ್ತು ಆತ ಮಾಡುತ್ತಿದ್ದ ಕರೆ ಮೇಲೆ ನಿಗಾವಹಿಸಲು ಆರಂಭಿಸಿದೆವು. ಆತ ಅವನ ಸ್ನೇಹಿತ ಪ್ರವೀಣ್ ಜೊತೆ ಮಾತನಾಡುತ್ತಿದ್ದ. ಪ್ರವೀಣ್ ಕಾಯಿನ್ ಬೂತ್ ನಿಂದ ಫೋನ್ ಮಾಡುತ್ತಿದ್ದ. ಅಷ್ಟು ಹೊತ್ತಿಗೆ ಮುಂದಿನ ಗುರಿ ಮೈಸೂರು ಮೂಲಕ ಕೆ ಎಸ್ ಭಗವಾನ್ ಅವರನ್ನು ಕೊಲ್ಲುವುದು ಗುರಿ ಎಂದು ನಮಗೆ ಗೊತ್ತಾಯಿತು. ಆಗ ನವೀನ್ ನನ್ನು ಬಂಧಿಸಬೇಕಾಯಿತು. 

ಈ ಮಧ್ಯೆ ಪ್ರವೀಣ್ ತನ್ನ ಸ್ನೇಹಿತ ಕಾರ್ಯಕರ್ತನ ಮದುವೆ ಸಮಾರಂಭದಲ್ಲಿ ಭಾಗವಹಿಸುವವನಿದ್ದ. ಬ್ರಹ್ಮಾವರದ ಮೋಹನ್ ಗೌಡ ಎಂಬ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ. ಅವನ ಮದುವೆ ಫೆಬ್ರವರಿ 25ಕ್ಕೆ ಇತ್ತು. ಮಾಧ್ಯಮವೊಂದು ನವೀನ್ ನ ಬಂಧನದ ವಿಷಯ ಬಿತ್ತರಿಸಿದಾಗ ಮತ್ತೊಬ್ಬ ಆರೋಪಿಯನ್ನು ಮದುವೆ ಸಮಾರಂಭದಲ್ಲಿ ಬಂಧಿಸುವ ಎಸ್ಐಟಿ ಯೋಜನೆ ವಿಫಲಲವಾಯಿತು. ಇಲ್ಲದಿದ್ದರೆ 3 ತಿಂಗಳ ಮೊದಲೇ ಪ್ರಕರಣವನ್ನು ಭೇದಿಸಬಹುದಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಡೈರಿಗಳಿಂದ ಸುಳಿವು : ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಪ್ರವೀಣ್ ನನ್ನು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಆರೋಪದ ಮೇಲೆ ಮೇ 2018ರಲ್ಲಿ ಬಂಧಿಸಿದ್ದರು. ಫೆಬ್ರವರಿಯಲ್ಲಿ ನವೀನ್ ಬಂಧನದ ನಂತರ ಗೌರಿ ಹತ್ಯೆಯ ತನಿಖೆಗೆ ಇದು ಪ್ರಮುಖ ಪ್ರಗತಿಯಾಗಿತ್ತು. ಪ್ರವೀಣ್  ಬಳಿ ಸಿಕ್ಕಿದ ಡೈರಿಯಲ್ಲಿ ಹಲವು ದೂರವಾಣಿ ಸಂಖ್ಯೆಗಳು, ಸನ್ನೆ ಹೆಸರುಗಳು ಸಿಕ್ಕಿತು. ಆಗ ತನಿಖಾಧಿಕಾರಿಗಳಿಗೆ ಗೌರಿ ಹತ್ಯೆಯ ಬಗ್ಗೆ ನಿಖರ ಸುಳಿವು ಸಿಕ್ಕಿತು. ಅದರಲ್ಲಿ ಅಮೋಲ್ ಕಾಳೆ ಅಲಿಯಾಸ್ ಬೈಸಾಬ್, ಅಮಿತ್ ದೆಗ್ವೇಕರ್ ಅಲಿಯಾಸ್ ಟಮಟರ್ ಮತ್ತು ಮನೋಹರ್ ಎಡವೆ.ಈ ಮಾಹಿತಿಯ ಮೇರೆಗೆ ಇವರು ಪುಣೆಯಿಂದ ಕರ್ನಾಟಕಕ್ಕೆ ಪ್ರಯಾಣ ಬೆಳೆಸುತ್ತಿರುವುದು ಗೊತ್ತಾಗಿ ಮೂವರನ್ನೂ ದಾವಣಗೆರೆಯಲ್ಲಿ ಬಂಧಿಸಿದರು. ಎಲ್ಲಾ ಮೂವರೂ ಪೊಲೀಸರಿಗೆ ಗೊತ್ತಿರುವವರೇನಲ್ಲ. ಇವರು ಕರ್ನಾಟಕದ ಸಿಂಧಗಿಯಲ್ಲಿ ಪರಶುರಾಮ ವಾಗ್ಮೊರೆಯನ್ನು ಬಂಧಿಸಲು ಹೊರಟಿದ್ದರು. ಈತನ ಹಿಂದೆ ಇದಕ್ಕೂ ಮುನ್ನ ಕೆಲವು ಕೇಸುಗಳು ದಾಖಲಾಗಿ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದ. ಆತನಿಗೆ ಗೌರಿ ಲಂಕೇಶ್ ಹತ್ಯೆ ಮಾಡಲು ಚಿಕ್ಕಾಲೆ ಮತ್ತು ಕನಕುಂಬಿಯಲ್ಲಿ ತರಬೇತಿ ನೀಡಲಾಗುತ್ತಿತ್ತು.

ಜೂನ್ 11ರಂದು ಪರಶುರಾಮ ವಾಗ್ಮೊರೆಯ ಬಂಧನವಾಯಿತು. ಪೊಲೀಸರು ಬಂಧಿಸಿದಾಗ ಆತನಿಗೆ ಏನೂ ಗಾಬರಿಯಾಗಿರಲಿಲ್ಲ. ಆತ ಗೌರಿಯನ್ನು ಹತ್ಯೆ ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದ. ನಂತರ ಮಹಾರಾಷ್ಟ್ರದಿಂದ ಸಚಿನ್ ಪ್ರಕಾಶ್ ರಾವ್ ಅಂಡುರೆಯ ಬಂಧನವಾಯಿತು. ನಂತರ ಮಹಾರಾಷ್ಟ್ರದಲ್ಲಿ ಐವರು ಬಲಪಂಥೀಯರ ಬಂಧನವಾಯಿತು. ಈ ಬಂಧನದ ನಂತರ ದಾಬೋಲ್ಕರ್ ಹತ್ಯೆಯನ್ನು ಭೇದಿಸಲಾಯಿತು. ಸಿಬಿಐ ಇದೀಗ ಕಾಳೆಯನ್ನು ಕಸ್ಟಡಿಗೆ ಕರೆದೊಯ್ದಿದೆ.ವಿಶೇಷ ತನಿಖಾ ತಂಡದ ಅಧಿಕಾರಿಗಳು 17 ಪಿಸ್ತೂಲ್, ಒಂದು ಕಪ್ಪು ಪಿಸ್ತೂಲ್ ನ್ನು ವಶಪಡಿಸಿಕೊಂಡಿದ್ದಾರೆ. ಇದೇ ಪಿಸ್ತೂಲ್ ಗಳನ್ನು ಗೌರಿ, ಕಲಬುರ್ಗಿ ಮತ್ತು ದಾಬೋಲ್ಕರ್ ಹತ್ಯೆಗೆ ಬಳಸಿರಬಹುದು ಎಂದು ಶಂಕಿಸಲಾಗಿದೆ. ಪುಣೆಯಲ್ಲಿ ಒಂದು ಬೈಕ್ ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

About the author

ಕನ್ನಡ ಟುಡೆ

Leave a Comment