ರಾಷ್ಟ್ರ ಸುದ್ದಿ

ಪರಿಕ್ಕರ್ ಬದುಕಿರುವುದು ಡೌಟು ಎಂದ ಕೈ: ಕೀಳುಮಟ್ಟದ ರಾಜಕೀಯ ಎಂದು ಜರಿದ ಕಮಲ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬದುಕಿರುವ ಸಾಧ್ಯತೆ ಕಡಿಮೆ ಎಂದು ಹೇಳುವ ಮೂಲಕ ಗೋವಾದ ಕಾಂಗ್ರೆಸ್ ನಾಯಕ ಜಿತೇಂದ್ರ ದೇಶಪ್ರಭು ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಬಿಜೆಪಿ, ಕೈ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದೆ.

ಸೋಮವಾರ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಿದ್ದ ಕೈ ಪಕ್ಷದ ವಕ್ತಾರ ದೇಶಪ್ರಭು, ಅನಾರೋಗ್ಯದಿಂದ ಬಳಲುತ್ತಿರುವ ಪರಿಕ್ಕರ್ ಅಕ್ಟೋಬರ್ 14 ರಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡೇ ಇಲ್ಲ. ಅವರು ಬದುಕಿರುವ ಸಾಧ್ಯತೆಗಳು ಕಡಿಮೆ ಎಂದಿದ್ದರು.

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎನ್ನಲಾದ ಪರಿಕ್ಕರ್ ಜೀವಂತವಾಗಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕಾಂಗ್ರೆಸ್ ಅವರನ್ನು ಭೇಟಿಯಾಗಲು ಬಯಸುತ್ತದೆ. ಅಕ್ಟೋಬರ್ 14ರಿಂದ ಅವರು ಯಾರಿಗೂ ಕಾಣಿಸಿಕೊಂಡಿಯೇ ಇಲ್ಲ. ಹೀಗಾಗಿ ಅವರು ಬದುಕಿರುವ ಬಗ್ಗೆಯೇ ನಮಗೆ ಅನುಮಾನವಿದೆ, ಎಂದು ದೇಶಪ್ರಭು ಸಂದೇಹ ಹೊರಹಾಕಿದ್ದರು.

ಮುಖ್ಯಮಂತ್ರಿ ಜೀವಂತವಾಗಿದ್ದಾರೆ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸುವುದು ಬಿಜೆಪಿ ನೇತೃತ್ವದ ಮೈತ್ರಿ ಸರಕಾರದ ಜವಾಬ್ದಾರಿ ಎಂದ ಅವರು ಪರಿಕ್ಕರ್ ಆರೋಗ್ಯದ ಗಂಭೀರತೆಯನ್ನು ಪರಿಗಣಿಸುತ್ತಲೇ ಇಲ್ಲ ಎಂದು ಮಾಧ್ಯಮಕ್ಕೂ ಚಾಟಿ ಬೀಸಿದ್ದರು. ಕಾಂಗ್ರೆಸ್‌ನ ಈ ಆಘಾತಕಾರಿ ಹೇಳಿಕೆಗೆ ತಿರುಗೇಟು ನೀಡಿರುವ ಗೋವಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಸೇಠ್ ಟನಾವಡೆ, ಕಾಂಗ್ರೆಸ್ ನಾಯಕನ ಹತಾಶೆಯನ್ನು ಪ್ರತಿಬಿಂಬಿಸುತ್ತದೆ. ಕೈ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ, ಎಂದು ಹೇಳಿದ್ದಾರೆ.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಒಂದು ತಿಂಗಳು ಚಿಕಿತ್ಸೆ ಪಡೆದು ರಾಜ್ಯಕ್ಕೆ ಹಿಂತಿರುಗಿದ್ದ ಪರಿಕ್ಕರ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಕ್ಟೋಬರ್ 27 ರಂದು ಮೊದಲ ಬಾರಿಗೆ ಪರಿಕ್ಕರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅಧಿಕೃತವಾಗಿ ಬಹಿರಂಗಪಡಿಸಿದ್ದರು.

About the author

ಕನ್ನಡ ಟುಡೆ

Leave a Comment