ರಾಜ್ಯ ಸುದ್ದಿ

ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದು

ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ ಘೋಷಣೆ ನಂತರ ರಾಜ್ಯಸರ್ಕಾರ ಈಗ ಪರಿಶಿಷ್ಟ ಜಾತಿ, ಮತ್ತು ಪಂಗಡದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲ ಮನ್ನಾ ಮಾಡಲು ಮುಂದಾಗಿದೆ. ಇದರ ಮೊದಲ ಹೆಜ್ಜೆಯಾಗಿ, ಸಮಾಜ ಕಲ್ಯಾಣ ಇಲಾಖೆ ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಇತರೆ ಈ ಬ್ಯಾಂಕ್ ಗಳಿಂದ ಈ ಸಮುದಾಯದ ವಿದ್ಯಾರ್ಥಿಗಳು ಪಡೆದಿರುವ ಶೈಕ್ಷಣಿಕ ಸಾಲದ ಬಗ್ಗೆ ಜಿಲ್ಲಾವಾರು ಮಾಹಿತಿ ಸಂಗ್ರಹಿಸುತ್ತಿದೆ. ಈ ಸಂಬಂಧ ಮಾಹಿತಿ ಸಲ್ಲಿಸುವಂತೆ ಸಮಾಜ ಕಲ್ಯಾಣ  ಇಲಾಖೆ  ಆಯುಕ್ತರು ಎಲ್ಲಾ ಜಿಲ್ಲೆಗಳ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡುವಂತೆ ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಅಧ್ಯಕ್ಷರು ಮಾಡಿದ ಮನವಿ ಮೇರೆಗೆ ಪತ್ರ ಬರೆದಿರುವುದಾಗಿ  ಆ ಪತ್ರದಲ್ಲಿ ತಿಳಿಸಲಾಗಿದೆ. ಅಧಿಕೃತ ಮೂಲಗಳ ಪ್ರಕಾರ ಉನ್ನತ ಶಿಕ್ಷಣಕ್ಕಾಗಿ  ಎಷ್ಟು ಮಂದಿ ವಿದ್ಯಾರ್ಥಿಗಳು  ಸಾಲ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ದೊರೆತಿಲ್ಲ.

ಸರ್ಕಾರದ ನಿರ್ದೇಶನದ ಮೇರೆಗೆ ರಾಷ್ಟ್ರೀಕೃತ್ಯ ಬ್ಯಾಂಕುಗಳು ಸೇರಿದಂತೆ ಇತರೆ ಬ್ಯಾಂಕುಗಳಿಂದ ಎಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ  ಮಟ್ಟದ ಅಧಿಕಾರಿಗಳಿಗೆ  ಆದೇಶ ಹೊರಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ  ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಇಂತಹ ಪ್ರಸ್ತಾವ ತಮ್ಮ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಹೇಳಿದ್ದಾರೆ. ಆಕ್ಟೋಬರ್ 4 ರಂದು ಹೊರಡಿಸಿರುವ ಆದೇಶದ ಪ್ರಕಾರ ವಿದ್ಯಾರ್ಥಿಗಳು ಯಾವ ಕೋರ್ಸಿಗಾಗಿ ಎಷ್ಟು ಸಾಲ ಪಡೆದಿದ್ದಾರೆ ಎಂಬುದರ ಬಗ್ಗೆ  ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಹಿತಿ ಒದಗಿಸುವಂತೆ  ಆದೇಶದಲ್ಲಿ ತಿಳಿಸಲಾಗಿದೆ. ಈ ಮಧ್ಯೆ  ಕೇವಲ ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳ ಸಾಲ ಮನ್ನಾಕ್ಕೆ ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.  ಕೃಷಿ ಸಾಲ ಮನ್ನಾವನ್ನು  ನಿಗದಿತ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ಆದರೆ, ನಿಗದಿತ ಸಮುದಾಯದ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡುವುದು ಏಕೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಹಿರಿಯ ಸಿಬ್ಬಂದಿಯೊಬ್ಬರು ಪ್ರಶ್ನಿಸಿದ್ದಾರೆ. ಸರ್ಕಾರದ ಈ ಕ್ರಮ ಅನ್ಯಾಯಯುತವಾದದ್ದು ಎಂದು ವಿದ್ಯಾರ್ಥಿನಿ ಕೀರ್ತನಾ ಆರೋಪಿಸಿದ್ದಾರೆ. ಈ ಮಧ್ಯೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಜೊತೆಗೆ ಮಾತನಾಡಿದ  ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ , ಇಂತಹ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಆಯುಕ್ತರು ಏಕೆ ಈ ರೀತಿ ಆದೇಶ ಹೊರಡಿಸಿದ್ದರು ಎಂಬ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment