ರಾಜ್ಯ ಸುದ್ದಿ

ಪಾಕಿಸ್ತಾನದಲ್ಲಿ ಭಾರತೀಯ ವಾಯುಸೇನೆ ದಾಳಿ; ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ

ಬೆಂಗಳೂರು: ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣ ಮತ್ತು ಶಿಬಿರಗಳ ಮೇಲೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ವಾಯುದಾಳಿ ನಡೆಸಿರುವುದರಿಂದ ಭಾರತ ಪಾಕ್ ನಡುವಿನ ಸಂಬಂಧ ಬಿಗಡಾಯಿಸಿದ್ದು ಈ ಹಿನ್ನಲೆಯಲ್ಲಿ ದೇಶಾದ್ಯಂತ ಸಾರ್ವಜನಿಕ ಸ್ಥಳಗಳು, ಜನ ನಿಬಿಡ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕರ್ನಾಟಕದ ವಿವಿಧ ರಕ್ಷಣಾ ಕೇಂದ್ರಗಳು ಮತ್ತು ತರಬೇತಿ ಶಿಬಿರಗಳಲ್ಲಿ ತೀವ್ರ ಎಚ್ಚರಿಕೆ ಮತ್ತು ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ನಗರದ ರೈಲು, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ ಇತ್ಯಾದಿ ಕಡೆಗಳಲ್ಲಿ ಜನರ ತಪಾಸಣೆ, ವಸ್ತುಗಳ ತಪಾಸಣೆ ತೀವ್ರವಾಗಿ ನಡೆಯುತ್ತಿದೆ. ಭದ್ರತೆಯ ಭಾಗವಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ನ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪೊಲೀಸ್ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ಮತ್ತು ತಪಾಸಣೆಗೆ ನಿಯೋಜಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೋಡಿಕೊಳ್ಳುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಈ ಸಂಬಂಧ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ರಾಜ್ಯಾದ್ಯಂತ ರೈಲು ನಿಲ್ದಾಣಗಳಲ್ಲಿ ಕೂಡ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಜೈಶ್ ಎ ಮೊಹಮ್ಮದ್ ಸಂಘಟನೆಯ ತಾಣಗಳ ಮೇಲೆ ಭಾರತೀಯ ವಾಯುಪಡೆಯ ದಾಳಿಯ ನಂತರ ಕಾರವಾರದಲ್ಲಿರುವ ನೌಕಾಪಡೆ ದುರಸ್ತಿ ಕೇಂದ್ರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಈ ಮಧ್ಯೆ ರಜೆಯ ಮೇಲೆ ತಮ್ಮ ಊರುಗಳಿಗೆ ತೆರಳಿರುವ ಸೇನಾಪಡೆ ಯೋಧರಿಗೆ ಮತ್ತು ಇತರ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪೊಲೀಸ್ ಪಡೆಗೆ ರಾಜ್ಯಾದ್ಯಂತ ಎಚ್ಚರವಾಗಿರುವಂತೆ ಸೂಚಿಸಲಾಗಿದೆ. ಆದರೆ ರಾಜ್ಯದ ಯಾವುದೇ ನಿರ್ದಿಷ್ಟ ಕೇಂದ್ರಗಳು ಮತ್ತು ಸ್ಥಳಗಳಿಗೆ ಎಚ್ಚರಿಕೆ ಕಳುಹಿಸಿಲ್ಲ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ನಿಗದಿಗಿಂತ ಹೆಚ್ಚಿನ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಸೇನಾ ಘಟಕಗಳಲ್ಲಿ ಮಾತ್ರವಲ್ಲದೆ ಇಸ್ರೊ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ(ಡಿಆರ್ ಡಿಒ)ಗಳಿಗೆ ಸಹ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

About the author

ಕನ್ನಡ ಟುಡೆ

Leave a Comment