ರಾಜಕೀಯ

ಪಾಕ್‌ಗೂ ಪ್ರಧಾನಿ ಮೋದಿಗೂ ಸಂಬಂಧವಿದೆ: ಸಿ.ಎಂ.ಇಬ್ರಾಹಿಂ

ಬಾಗಲಕೋಟ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನಕ್ಕೆ ಗಾಢವಾದ ಸಂಬಂಧವಿದೆ’ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು. ಕಾಶ್ಮೀರದ ಸಮಸ್ಯೆ ಪರಿಹಾರವಾಗುತ್ತದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಇದು ಭಾರಿ ಸಂತೋಷದ ವಿಷಯವಾಗಿದೆ. ಇದೇ ಇಮ್ರಾನ್‌ ಖಾನ್‌ ಅವರು ರಾಹುಲ್‌ ಖಾನ್‌ ಬಗ್ಗೆ ಹೇಳಿದ್ದರೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತಕಥೈ ಕುಣಿಯುತ್ತಿದ್ದರು. ನವಾಜ್‌ ಷರೀಫ್‌ ಕರೆಯದಿದ್ದರೂ ಮೋದಿ ಉಡುಗೊರೆ ತೆಗೆದುಕೊಂಡು ಹೋಗಿದ್ದರು. ಮೋದಿ ಹಾಗೂ ಇಮ್ರಾನ್‌ ಮಧ್ಯದ ಒಳ ಒಪ್ಪಂದದ ಬಗ್ಗೆ ಅಮಿತ್‌ ಶಾ ಹೇಳಬೇಕು. ಇದನ್ನೆಲ್ಲ ನೋಡಿದರೆ ಪುಲ್ವಾಮಾ ದಾಳಿ, ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಸಂಶಯ ಮೂಡುತ್ತಿದೆ. ಭಾರತದ ಪುಣ್ಯ ಭೂಮಿಯ ಮೇಲೆ ಪಾಪಿಗಳು ನಿಂತಿಲ್ಲ, ರಾವಣ, ಧುರ್ಯೋದನ ಉಳಿದಿಲ್ಲ’ ಎಂದು ಛೇಡಿಸಿದರು.

ದಾಳಿಯಿಂದ ಅನುಕಂಪ : ‘ಬಿಜೆಪಿಯವರು ಬಲಿಷ್ಠ ಪ್ರಧಾನಿ ಬೇಕು ಎನ್ನುತ್ತಾರೆ. ಭಾರತ ಯಾವಾಗ ದುರ್ಬಲವಾಗಿತ್ತು ಎನ್ನುವುದು ನನ್ನ ಪ್ರಶ್ನೆ, 70 ವರ್ಷದ ಇತಿಹಾಸ ನೋಡಿದರೆ ಭಾರತ ಬಲಿಷ್ಠವಾಗಿಯೇ ಇರುವುದು ಗೊತ್ತಾಗುತ್ತದೆ. ಬ್ರಿಟಿಷರು ಭಾರತ ಬಿಟ್ಟು ಹೋದಾಗಲೂ ಭಾರತ ಪ್ರಬಲವಾಗಿತ್ತು’ ಎಂದರು.’ಐಟಿಯವರು ಕಾಂಗ್ರೆಸ್‌ನವರ ಮನೆಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದಾರೆ. ಚಿತ್ರದುರ್ಗ, ಮೈಸೂರಿನಲ್ಲಿ ಮೋದಿ ಸಭೆ ನಡೆಸಿದ್ದಾರೆ, ಇದಕ್ಕಾಗಿ ಎಷ್ಟು ಕೋಟಿ ಖರ್ಚಾಯಿತು ಎಂದು ಐಟಿಯವರು ದಾಳಿ ಮಾಡಬಹುದಿತ್ತು. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಮೋದಿಯವರು ದಾಳಿ ಮಾಡಿಸುತ್ತಿರುವುದು ದೇಶಕ್ಕೆ ಒಳ್ಳೆಯದಲ್ಲ. ಅಧಿಕಾರವಿದ್ದಾಗ ಹೀಗೆ ಬಿಜೆಪಿಯವರೂ ಮಾಡಬಾರದು, ಕಾಂಗ್ರೆಸ್‌ನವರೂ ಮಾಡಬಾರದು. ಜನರ ಬಳಿ ಹೋಗಿ ಮತ ಕೇಳಲು ಬಿಜೆಪಿ ಬಳಿ ಏನೂ ಉಳಿದಿಲ್ಲ. ಐಟಿ ದಾಳಿಯಿಂದ ನಮಗೆ ಅನುಕಂಪ ದೊರೆಯಲಿದೆ’ ಎಂದು ವಿವರಿಸಿದರು.

ನಾವು ತಲೆ ಹಿಡಿವರಲ್ಲ: ‘ನೊಂದುಕೊಂಡಿರುವ ಬಿಜೆಪಿ ಮುಖಂಡ ಈಶ್ವರಪ್ಪ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ನಾವು ಪಾದ ಹಿಡಿಯುವವರು, ತಲೆ ಹಿಡಿಯುವವರಲ್ಲ. ಕನ್ನಡ ನಾಡಿನ ಜನತೆಯ ಶ್ರೀರಕ್ಷೆ ನಮಗಿದೆ, ನಮ್ಮ ಸರ್ವಸ್ವ ಅವರ ಪಾದದ ಮೇಲಿದೆ. ಈಶ್ವರಪ್ಪ ಅಣ್ಣ ಗಂಗಾಧರಯ್ಯರಿಗೆ ನಾನು ಸಚಿವನಿದ್ದಾಗ ಕೈಗಾರಿಕೆಗಾಗಿ ನಿವೇಶನ ಕೊಡಿಸಿದ್ದೇನೆ. ಚುನಾವಣೆ ಮುಗಿದ ಬಳಿಕ ಈಶ್ವರಪ್ಪ ಸರಿಯಾಗುತ್ತಾರೆ. ನಾವು ಮುಸ್ಲಿಂರಿಗೆ ಟಿಕೆಟ್‌ ಕೊಟ್ಟಿಲ್ಲ ಎನ್ನುತ್ತಾರೆ, ಕುರುಬರಿಗೆ ಒಂದು ಸೀಟು ಕೊಡಿಸಲು ಅವರಿಗೆ ಆಗಿಲ್ಲ, ನಮಗೇನು ಸೀಟ್‌ ಕೊಡಿಸ್ತಾನೆ’ ಎಂದು ಟೀಕಿಸಿದರು. ‘ಮಾಧ್ಯಮಗಳ ಬಗ್ಗೆ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ಕರ್ನಾಟಕದಲ್ಲಿ ಮಾಧ್ಯಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಇಂಗ್ಲಿಷ್‌ ಮಾಧ್ಯಮಗಳಂತೆ ಕನ್ನಡ ಮಾಧ್ಯಮ ವರ್ತಿಸಿದ್ದರೆ ನಮ್ಮ ಸ್ಥಿತಿ ಅಯ್ಯೋ ಎನಿಸುವಂತಾಗುತ್ತದೆ. ಚುನಾವಣೆ, ಮೋದಿ ಬರುತ್ತಾರೆ ಹೋಗುತ್ತಾರೆ, ಆದರೆ ಮಾಧ್ಯಮ ಧರ್ಮ ಸೂರ್ಯ, ಚಂದ್ರರಿರುವವರೆಗೆ ಇರುತ್ತದೆ’ ಎಂದು ತಿಳಿಸಿದರು.

About the author

ಕನ್ನಡ ಟುಡೆ

Leave a Comment