ಅ೦ತರಾಷ್ಟ್ರೀಯ

ಪಾಕ್‌ಗೆ ನೆರವು ಕೊಡ್ತೀವಿ, ಆದರೆ ಇನ್ನಷ್ಟು ಚರ್ಚೆ ಅಗತ್ಯ: ಚೀನಾ

ಬೀಜಿಂಗ್: ಪಾಕಿಸ್ತಾನಕ್ಕೆ ಚೀನಾ ಆರ್ಥಿಕ ನೆರವು ನೀಡುತ್ತದೆ, ಆದರೆ ಆ ಬಗ್ಗೆ ಮತ್ತಷ್ಟು ಸ್ಪಷ್ಟತೆಗಾಗಿ ಮಾತುಕತೆಗಳು ಅಗತ್ಯವಿದೆ ಎಂದು ಚೀನಾದ ಹಿರಿಯ ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ. ಪಾಕ್‌ನ ನೂತನ ಪ್ರಧಾನಿ ಇಮ್ರಾನ್ ಖಾನ್ ಚೀನೀ ಪ್ರಧಾನಿ ಲಿ ಕೆಖಿಯಾಂಗ್ ಅವರನ್ನು ಶನಿವಾರ ಭೇಟಿ ಮಾಡಿದ ಬಳಿಕ ಈ ಹೇಳಿಕೆ ಹೊರಬಿದ್ದಿದೆ.

ಪಾಕಿಸ್ತಾನದ ವಿದೇಶೀ ಮೀಸಲು ನಿಧಿ ಶೇ 42ರಷ್ಟು ಕುಸಿದಿದ್ದು, ಪ್ರಸ್ತುತ 800 ಕೋಟಿ ಡಾಲರ್‌ಗಳಷ್ಟು ಮಾತ್ರವಿದೆ. ಇದು ಎರಡು ತಿಂಗಳ ಆಮದು ವೆಚ್ಚಕ್ಕೂ ಸಾಲದು. ಪಾಕಿಸ್ತಾನ ಕಳೆದ ತಿಂಗಳು ಸೌದಿ ಅರೇಬಿಯಾದಿಂದ 600 ಕೋಟಿ ಡಾಲರ್‌ ರಕ್ಷಣಾ ಪ್ಯಾಕೇಜ್‌ ಸ್ವೀಕರಿಸಿತ್ತು. ಆದರೆ ಇದು ಸಾಕಾಗದ ಹಿನ್ನೆಲೆಯಲ್ಲಿ ಪಾವತಿ ಬಿಕ್ಕಟ್ಟು ನಿಭಾಯಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್‌) ಪಾರುಗಾಣಿಕೆ ಹಣ ಪಡೆಯಲು ಯೋಚಿಸುತ್ತಿದೆ.

1980ರಿಂದೀಚೆಗೆ ಪಾಕಿಸ್ತಾನ ಈ ರೀತಿ ವಿದೇಶಗಳಿಂದ 13ನೇ ಬಾರಿಗೆ ಪಾರುಗಾಣಿಕೆ ಪ್ಯಾಕೇಜ್‌ ಪಡೆಯುತ್ತಿದೆಚೀನೀ ಪ್ರಧಾನಿಯನ್ನು ಇಮ್ರಾನ್‌ ಖಾನ್ ಭೇಟಿಯಾಗಿ ನೆರವು ಕೋರಿದ ಹಿನ್ನೆಲೆಯಲ್ಲಿ, ತಮ್ಮ ದೇಶ ಪಾಕ್ ನೆರವಿಗೆ ಸಿದ್ಧವಿರುವುದಾಗಿ ಚೀನೀ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ತಿಳಿಸಿದರು.

‘ಪಾಕ್‌ನ ಆರ್ಥಿಕ ಸಂಕಷ್ಟ ನೀಗಲು ಚೀನೀ ಸರಕಾರ ಅಗತ್ಯವಿರುವ ನೆರವು ನೀಡುತ್ತದೆ. ಆದರೆ ಈ ನಿಟ್ಟಿನಲ್ಲಿ ಸ್ಪಷ್ಟತೆಗಾಗಿ ಮತ್ತಷ್ಟು ಮಾತುಕತೆಗಳು ಅಗತ್ಯವಿದೆ’ ಎಂದು ಚೀನೀ ಸಚಿವರು ನುಡಿದರು.

ಚೀನಾ ಪಾಕಿಸ್ತಾನದ ಅತ್ಯಂತ ಆಪ್ತ ಮಿತ್ರನಾಗಿದ್ದರೂ, ಹಿಂದಿನ ಸರಕಾರ ಸಹಿ ಹಾಕಿದ್ದ 6000 ಕೋಟಿ ಡಾಲರ್‌ ಮೌಲ್ಯದ ಮಹತ್ವಾಕಾಂಕ್ಷಿ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್‌ (ಸಿಪೆಕ್‌) ಯೋಜನೆಯನ್ನು ಮರುಪರಿಶೀಲಿಸುವಂತೆ ಇಮ್ರಾನ್ ಖಾನ್ ಕೋರಿದ್ದಾರೆ.

ಕೇವಲ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡದೆ, ಸಾಮಾಜಿಕ ಪ್ರಗತಿಗೂ ಈ ಯೋಜನೆಯಿಂದ ನೆರವಾಗಬೇಕು ಎಂದು ಪಾಕಿಸ್ತಾನ ಬಯಸುತ್ತಿದೆ. ಸಿಪೆಕ್ ಒಪ್ಪಂದದಡಿ ಯೋಜನೆಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆಯೇ ಹೊರತು ಕಡಿಮೆಯಾಗದು’ ಎಂದು ಕಾಂಗ್ ಸ್ಪಷ್ಟಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment