ರಾಷ್ಟ್ರ ಸುದ್ದಿ

ಪಾಕ್‌ ನಾಗರಿಕರಿಗೆ ಆಹಾರ, ನೀರು ಕೊಟ್ಟು ಮಾನವೀಯತೆ ಮೆರೆದ ಪಂಜಾಬ್‌ ಪೊಲೀಸರು

ಚಂಡೀಗಢ: ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆ ಶಾಂತಿ ಸಂಕೇತವಾಗಿ ಉಭಯ ರಾಷ್ಟ್ರಗಳ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್‌ ರೈಲನ್ನು ಪಾಕಿಸ್ತಾನ ಸ್ಥಗಿತಗೊಳಿಸಿದ ನಂತರ ಭಾರತದಲ್ಲಿ ಸಿಲುಕಿದ್ದ ಪಾಕಿಸ್ತಾನಿಯರಿಗೆ ಪಂಜಾಬ್‌ ಪೊಲೀಸರು ಆಹಾರ, ನೀರು ಕೊಟ್ಟು, ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಸಹಾಯ ಮಾಡಿದ್ದಾರೆ.

ಐಎಎನ್‌ಎಸ್‌ ವರದಿ ಪ್ರಕಾರ ಸುಮಾರು 40-50 ಪಾಕಿಸ್ತಾನಿ ಪ್ರಯಾಣಿಕರು ಪಂಜಾಬ್‌ನ ಅಮೃತಸರದ ಅತಾರಿ ರೈಲ್ವೆ ನಿಲ್ದಾಣದಲ್ಲಿ ತವರಿಗೆ ಮರಳಲಾಗದೆ ಸಿಕ್ಕಿಹಾಕಿಕೊಂಡಿದ್ದರು. ಹಲವು ಗಂಟೆಗಳಿಂದ ಕಾದು ಕುಳಿತಿದ್ದ ಪಾಕಿಸ್ತಾನ ಪ್ರಯಾಣಿಕರಿಗೆ ಪಂಜಾಬ್‌ ಪೊಲೀಸರು ಆಹಾರ ಮತ್ತು ನೀರು ಕೊಟ್ಟು ಸಹಾಯ ಮಾಡಿದ್ದಾರೆ. ಜತೆಗೆ ಪಾಕಿಸ್ತಾನಕ್ಕೆ ಮರಳಲು ಅಂತಾರಾಷ್ಟ್ರೀಯ ಗಡಿ ಅತಾರಿ-ವಾಘಾ ಚೆಕ್‌ಪೋಸ್ಟ್‌ ಮೂಲಕ ದಾಟಿಸಿ ಪಾಕಿಸ್ತಾನಿಯರಿಗೆ ಉಪಕಾರ ಮಾಡಿದ್ದಾರೆ. ಪಾಕಿಸ್ತಾನ ಸರಕಾರ ಗುರುವಾರ ಉಭಯ ರಾಷ್ಟ್ರಗಳ ನಡುವಣ ಶಾಂತಿ ಸಂಕೇತದ ಸಮ್‌ಜೋತಾ ರೈಲನ್ನು ಸ್ಥಗಿತಗೊಳಿಸಿದ್ದರು. ಲಾಹೋರ್‌ ರೈಲು ನಿಲ್ದಾಣದಿಂದ ಹೊರಡುವ ರೈಲು ಅತಾರಿಗೆ ಆಗಮಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವಣ ಕೊಂಡಿಯಂತಿರುವ ಈ ರೈಲು ಸೋಮವಾರ ಮತ್ತು ಗುರುವಾರ ಲಾಹೋರ್‌-ಅತಾರಿ ಮಧ್ಯೆ ಸಂಚರಿಸುತ್ತದೆ. ಭಾರತದ ಮತ್ತೊಂದು ರೈಲು ಅತಾರಿಯೊಂದಿಗೆ ದಿಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ.

About the author

ಕನ್ನಡ ಟುಡೆ

Leave a Comment