ರಾಷ್ಟ್ರ ಸುದ್ದಿ

ಪಾಕ್ ಸೇನೆಯ ಎಫ್-16 ವಿಮಾನ ಹೊಡೆದುರುಳಿಸಿದ್ದು ನಿಜ: ಸಾಕ್ಷಿಯಾಗಿ ರಾಡಾರ್ ಇಮೇಜ್ ನೀಡಿದ ವಾಯುಸೇನೆ

ನವದೆಹಲಿ: ಅಮೆರಿಕ ಪಾಕಿಸ್ತಾನಕ್ಕೆ ನೀಡಿದ್ದ ಎಲ್ಲ ಎಫ್-16 ಯುದ್ಧ ವಿಮಾನಗಳು ಸುರಕ್ಷಿತವಾಗಿವೆ ಎಂಬ ಮ್ಯಾಗಜಿನ್ ವರದಿಯನ್ನು ಭಾರತೀಯ ವಾಯುಸೇನೆ ತಳ್ಳಿ ಹಾಕಿದ್ದು, ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕೆ ತನ್ನ ವಿಮಾನಗಳ ರಾಡಾರ್ ಇಮೇಜ್ ಅನ್ನು ಸಾಕ್ಷಿಯಾಗಿ ನೀಡಿದೆ. ಹೌದು.. ಪಾಕಿಸ್ತಾನದ ಹಸಿ ಸುಳ್ಳುನ್ನು ಭಾರತೀಯ ವಾಯು ಸೇನೆ ಮತ್ತೊಮ್ಮೆ ಬಟಾಬಯಲು ಮಾಡಿದ್ದು, ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಬಾಲಾಕೋಟ್ ವಾಯುದಾಳಿ  ಬಳಿಕ ಪಾಕಿಸ್ತಾನದ ಎಫ್-16 ಯುದ್ದ ವಿಮಾನಗಳು ಭಾರತೀಯ ವಾಯುಗಡಿ ಪ್ರವೇಶಿಸಿದ್ದವು. ಈ ವೇಳೆ ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್ ಮತ್ತು ಇತರೆ ಪೈಲಟ್ ಗಳು ಮಿಗ್ 21 ಬೈಸನ್ ಸೇರಿದಂತೆ ವಿವಿಧ ಯುದ್ಧ ವಿಮಾನಗಳ ಮೂಲಕ ಪಾಕಿಸ್ತಾನಿ ಜೆಟ್ ಗಳನ್ನು ಹಿಮ್ಮೆಟ್ಟಿಸಿದ್ದರು. ಈ ವೇಳೆ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಅಂತೆಯೇ ಈ ಕಾಳಗದಲ್ಲಿ ಅಭಿನಂದನ್ ಚಲಾಯಿಸುತ್ತಿದ್ದ ಮಿಗ್ 21 ಬೈಸನ್ ಯುದ್ಧ ವಿಮಾನ ಕೂಡ ಪತನವಾಗಿತ್ತು. ಬಳಿಕ ಅಭಿನಂದನ್ ರನ್ನು ಪಾಕಿಸ್ತಾನ ಸೇನೆ ಬಂಧಿಸಿ ಬಳಿಕ ಬಿಡುಗಡೆ ಮಾಡಿತ್ತು. ಇದೀಗ ಪಾಕಿಸ್ತಾನ ತನ್ನ ಯಾವುದೇ ಎಫ್-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ. ಭಾರತದ ಮೇಲೆ ದಾಳಿಗೆ ತಾನು ಅಮೆರಿಕ ನೀಡಿದ್ದ ಎಫ್-16 ಯುದ್ಧ ವಿಮಾನವನ್ನು ಬಳಕೆ ಮಾಡಿಲ್ಲ ಎಂದು ವಾದಿಸಿತ್ತು. ಅಲ್ಲದೆ ಅಮೆರಿಕದ ಮೂಲದ ಮ್ಯಾಗಜಿನ್ ವೊಂದು ಪಾಕಿಸ್ತಾನಕ್ಕೆ ಅಮೆರಿಕ ನೀಡಿರುವ ಎಲ್ಲ ಎಫ್-16 ಯುದ್ಧ ವಿಮಾನಗಳು ಸುರಕ್ಷಿತವಾಗಿವೆ. ಹೀಗಾಗಿ ಭಾರತದ ವಾದದಲ್ಲಿ ಹುರುಳಿಲ್ಲ ಎಂಬರ್ಥದಲ್ಲಿ ವರದಿ ಪ್ರಕಟಿಸಿತ್ತು. ಈ ವರದಿ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಇದೀಗ ಈ ಸಂಬಂಧ ಭಾರತೀಯ ವಾಯುಸೇನೆ ಸ್ಪಷ್ಟನೆ ನೀಡಿದೆ. ಅಲ್ಲದೆ ಈ ಸಂಬಂಧ ಅಭಿನಂದನ್ ವರ್ಧಮಾನ್ ಯುದ್ಧ ವಿಮಾನದಿಂದ ದೊರೆತಿದ್ದ ರಾಡಾರ್ ಇಮೇಜ್ ಹಾಗೂ ಪತನಗೊಂಡ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಅವಶೇಷಗಳ ದಾಖಲಾತಿಯನ್ನೂ ಮಾಧ್ಯಮಗಳಿಗೆ ನೀಡಿದೆ. ಅಂದು ಪಾಕಿಸ್ತಾನ ಜೆಟ್ ಯುದ್ಧ ವಿಮಾನಗಳನ್ನು ಹಿಮ್ಮೆಟಿಸಲು ಭಾರತ ಬಳಕೆ ಮಾಡಿದ್ದ ಐಎಎಫ್ ಸುಖೋಯ್ ಎಂಕೆಐ, ಮಿರಾಜ್ 2000 ಮತ್ತು ಮಿಗ್ 21 ಬೈಸನ್ ಫೈಟರ್ ಜೆಟ್ ಗಳ ರಾಡಾರ್ ದಾಖಲಾತಿ ಸಂಗ್ರಹವನ್ನೂ ವಾಯುಸೇನೆ ಬಿಡುಗಡೆ ಮಾಡಿದೆ. ಅಲ್ಲದೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳು ಭಾರತೀಯ ವಾಯುಗಡಿ ರೇಖೆ ದಾಟಿ ಒಳಗೆ ಬಂದಾಗ ಗಡಿಯಲ್ಲಿರುವ ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ ನಲ್ಲಿ ದಾಖಲಾತಿಯನ್ನೂ ಕೂಡ ಸೇನೆ ಬಿಡುಗಡೆ ಮಾಡಿದೆ. ಅಲ್ಲದೆ ವಾಯುದಾಳಿ ವೇಳೆ ಪಾಕಿಸ್ತಾನ ವಾಯುಸೇನೆಯ ಪೈಲಟ್ ಗಳು ಎಫ್-16 ಮೂಲಕ ಹಲವು ಸುತ್ತು AMRAAM ಕ್ಷಿಪಣಿಗಳ ಮೂಲಕ ದಾಳಿ ಮಾಡಿದ್ದು, ಈ ಪೈಕಿ ತನ್ನ ಗಡಿಯಲ್ಲಿ ಬಿದ್ದಿದ್ದ ಕ್ಷಿಪಣಿಯ ಅವಶೇಷಗಳನ್ನು ಈಗಾಗಲೇ ಮಾದ್ಯಮಗಳಿಗೆ ಪ್ರದರ್ಶನ ಮಾಡಿದ್ದೇವೆ ಎಂದು ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಏರ್ ವೈಸ್ ಮಾರ್ಷಲ್ ಆರ್ ಜಿಕೆ ಕಪೂರ್ ಅವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment