ರಾಷ್ಟ್ರ ಸುದ್ದಿ

ಪಿಎನ್‌ಬಿ ವಂಚನೆ ಪ್ರಕರಣ ಆರೋಪಿ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್

ಹೊಸದಿಲ್ಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣ ಮುಖ್ಯ ಆರೋಪಿಗಳಲ್ಲಿ ಒಬ್ಬರಾದ ವಜ್ರದ ವ್ಯಾಪಾರಿ ಮೊಹುಲ್ ಚೋಕ್ಸಿ ವಿರುದ್ಧ ಇಂಟರ್‌ಪೋಲ್ ಅಂತಾರಾಷ್ಟ್ರೀಯ ಬಂಧನ ವಾರಂಟ್, ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ. ಭಾರತ ತನಿಖಾ ಸಂಸ್ಥೆ ಸಿಬಿಐ ಸೂಚನೆ ಮೇರೆಗೆ ಇಂಟರ್‌ಪೋಲ್ ಈ ಬಂಧನ ವಾರಂಟ್ ಜಾರಿಗೊಳಿಸಿದೆ.

ಈ ಪ್ರಕರಣದ ಮತ್ತೊಬ್ಬ ಆರೋಪಿ ನೀರವ್ ಮೋದಿ ವಿರುದ್ಧವೂ ಇಂಟರ್‌ಪೋಲ್ ಈಗಾಗಲೆ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿದೆ. ಆ ಸಮಯದಲ್ಲಿ ಚೋಕ್ಸಿ ಪ್ರಕರಣವನ್ನು ಇಂಟರ್‌ಪೋಲ್ ಇತ್ಯರ್ಥ ಮಾಡದೆ ಬಾಕಿ ಉಳಿಸಿಕೊಂಡಿತ್ತು. ಇದೀಗ ಸಿಬಿಐನಿಂದ ಇನ್ನಷ್ಟು ಮಾಹಿತಿ ಪಡೆದ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ ಚೋಕ್ಸಿ ಬಂಧನಕ್ಕೆ ಬಲೆ ಬೀಸಿದೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್‌‍ನ 13,578 ಕೋಟಿ ರೂ. ಹಗರಣ ಬಯಲಾದ 10 ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಇದೀಗ ರೆಡ್ ಕಾರ್ನರ್ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ 192 ದೇಶಗಳಲ್ಲಿ ಎಲ್ಲೇ ಅಡಗಿದ್ದರೂ ಆರೋಪಿಯನ್ನು ಬಂಧಿಸುವುದು ಸುಲಭವಾಗುತ್ತದೆ. ಅದೇ ರೀತಿ ಅವರ ಬಳಿ ಇರುವ 32 ದೇಶಗಳಿಗೆ ವೀಸಾ ರಹಿತ ಸಂಚಾರ ಕಲ್ಪಿಸುವ ಆಂಟಿಗುವಾ ಪಾಸ್‌ಪೋರ್ಟ್‌ನ್ನು ಸಹ ನಿರ್ಬಂಧಿಸಲಾಗುತ್ತದೆ.

ಸುಮಾರು 13,578 ಕೋಟಿ ರೂ. ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ ಇದೇ ವರ್ಷ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿತ್ತು. ನೀರವ್ ಮೋದಿ, ಛೋಕ್ಸಿ ಸೇರಿದಂತೆ ಹಲವರ ವಿರುದ್ಧ ಸಿಬಿಐ, ಜಾರಿ ನಿರ್ದೇಶಾನಾಲಯ (ಇಡಿ) ಪ್ರಕರಣ ದಾಖಲಿಸಿದ್ದವು.

ಆದರೆ ಪ್ರಕರಣ ಬೆಳಕಿಗೆ ಬರುವ ಮುನ್ನವೇ ನೀರವ್, ಛೋಕ್ಸಿ ದೇಶ ಬಿಟ್ಟು ಪರಾರಿಯಾಗಿದ್ದರು. ಅವರನ್ನು ಸ್ವದೇಶಕ್ಕೆ ತರಲು ಸಿಬಿಐ ತೀವ್ರವಾಗಿ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿಯೇ ಇಂಟರ್‌ಪೋಲ್ ಮೊರೆ ಹೋಗಿದೆ. ಪ್ರಸ್ತುತ ನೀರವ್ ಬ್ರಿಟನ್‌ನಲ್ಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನೊಂದು ಮೂಲದ ಪ್ರಕಾರ ಚೋಕ್ಸಿ ಆಂಟಿಗುವಾದಲ್ಲಿದ್ದು ಅಲ್ಲಿನ ಪೌರತ್ವ ಪಡೆದಿದ್ದಾರೆ ಎಂಬ ಸುದ್ದಿಯೂ ಇದೆ.

About the author

ಕನ್ನಡ ಟುಡೆ

Leave a Comment