ರಾಷ್ಟ್ರ ಸುದ್ದಿ

ಟ್ರಂಪ್‌ಗೆ ತಿರುಗೇಟು, ಪುಟಿನ್‌ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭೇಟಿ

ಹೊಸದಿಲ್ಲಿ: ಅಮೆರಿಕದ ದಿಗ್ಬಂಧನ ಬೆದರಿಕೆ ನಡುವೆಯೂ ಭಾರತ ಮತ್ತು ರಷ್ಯಾ ದೇಶಗಳು ಎಸ್‌400 ಕ್ಷಿಪಣಿ ಪ್ರತಿರೋಧ ವ್ಯವಸ್ಥೆ ಖರೀದಿ ಸಹಿತ ಎಂಟು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ದಿಲ್ಲಿಯ ಹೈದರಾಬಾದ್‌ ಹೌಸ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಪ್ರಧಾನಿ ಮೋದಿ ಅವರು ಮೂರು ಶಸ್ತ್ರಾಸ್ತ್ರ ಪೂರೈಕೆ ಒಪ್ಪಂದ ಸಹಿತ ಒಟ್ಟಾರೆ 10 ಬಿಲಿಯನ್‌ ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ ಎಸ್‌400 ಕ್ಷಿಪಣಿ ಪ್ರತಿರೋಧ ವ್ಯವಸ್ಥೆ, 4 ರಹಸ್ಯ ಯುದ್ಧನೌಕೆಗಳು, ಮೇಕ್‌ ಇನ್‌ ಇಂಡಿಯಾ ಮೂಲಕ ಎಕೆ-103 ಅಸಾಲ್ಟ್ ರೈಫ‌ಲ್‌ಗ‌ಳ ಉತ್ಪಾದನೆ ಒಪ್ಪಂದವೇ 5.43 ಬಿಲಿಯನ್‌ ಡಾಲರ್‌ (40ಸಾವಿರ ಕೋ.ರೂ.) ಮೌಲ್ಯದ್ದಾಗಿದೆ.

ಜಂಟಿ ಹೇಳಿಕೆ ಬಿಡುಗಡೆ: ಮೋದಿ ಮತ್ತು ಪುಟಿನ್‌ ನಡುವಿನ ಮಾತುಕತೆ ಬಳಿಕ ಎರಡೂ ದೇಶಗಳ ಪರವಾಗಿ ಜಂಟಿ ಹೇಳಿಕೆ ಬಿಡುಗಡೆ ಮಾಡಿ, “ಎಸ್‌-400 ದೂರವ್ಯಾಪ್ತಿಯ ನೆಲದಿಂದ ಆಕಾಶಕ್ಕೆ ಚಿಮ್ಮಬಲ್ಲ ಕ್ಷಿಪಣಿ ವ್ಯವಸ್ಥೆಯ ಪೂರೈಕೆ ಬಗ್ಗೆ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಬಾಹ್ಯಾಕಾಶ, ಅಣು ಸಹಕಾರ, ರೈಲ್ವೇ, ಕೃಷಿಗೆ ಸಂಬಂಧಿಸಿ 8 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಜತೆಗೆ 2025ರ ವೇಳೆಗೆ 30 ಶತಕೋಟಿ ಡಾಲರ್‌ ಮೊತ್ತದ ದ್ವಿಪಕ್ಷೀಯ ವ್ಯವಹಾರದ ಗುರಿ ಹೊಂದಲಾಗಿದೆ ಎಂದು ಉಲ್ಲೇಖೀಸಲಾಗಿದೆ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧವು ಮಿಲಿಟರಿ ಸಾಮಗ್ರಿಗಳು ಮತ್ತು ಮಿಲಿಟರಿ ವಿನಿಮಯಕ್ಕೂ ಮೀಗಿಲಾದದ್ದು ಎಂದು ಪುಟಿನ್‌ ಅಭಿಪ್ರಾಯಪಟ್ಟಿದ್ದಾರೆ. 2019ರ ಸೆಪ್ಟಂಬರ್‌ನಲ್ಲಿ ವ್ಲಾಡಿವೋಸ್ಟಾಕ್‌ನಲ್ಲಿ ನಡೆಯಲಿರುವ ವ್ಯಾಪಾರ ಶೃಂಗದಲ್ಲಿ ಭಾಗವಹಿಸುವಂತೆಯೂ ಪ್ರಧಾನಿ ಮೋದಿ ಅವರಿಗೆ ಪುಟಿನ್‌ ಆಹ್ವಾನ ನೀಡಿದ್ದಾರೆ. ಇದಾದ ಬಳಿಕ ಇಬ್ಬರೂ ನಾಯಕರು ಭಾರತ-ರಷ್ಯಾ ವಾಣಿಜ್ಯ ಶೃಂಗದಲ್ಲಿ ಪಾಲ್ಗೊಂಡು ಮಾತನಾಡಿದರು.

24 ತಿಂಗಳಲ್ಲಿ ಪೂರೈಕೆ ಶುರು: ಒಪ್ಪಂದದ ಬಗ್ಗೆ ಮಾತನಾಡಿದ ವಾಯು ಸೇನೆ ಮುಖ್ಯಸ್ಥ ಬಿ.ಎಸ್‌.ಧನೋವಾ, ಎಸ್‌-400 ಡಿಫೆನ್ಸ್‌ ಮಿಸೈಲ್‌ ಒಪ್ಪಂದದ ಬಗ್ಗೆ ಮಾಹಿತಿ ನೀಡಿದರು. ಈ ಒಪ್ಪಂದದ ಪ್ರಕಾರ ಇನ್ನು 24 ತಿಂಗಳ ಬಳಿಕ ಭಾರತಕ್ಕೆ ಈ ಕ್ಷಿಪಣಿಯನ್ನು ಪೂರೈಕೆ ಮಾಡಲಾಗುತ್ತದೆ. ಅಂದರೆ 2020ರ ಅಂತ್ಯದ ವೇಳೆಗೆ ಭಾರತಕ್ಕೆ ಸಿಗಲಿವೆ. 2016ರ ಅಕ್ಟೋಬರ್‌ನಲ್ಲೇ ಈ ಸಂಬಂಧ ಪೂರ್ವಭಾವಿ ಪ್ರಕ್ರಿಯೆಗಳು ಮುಗಿದಿದ್ದವು. ಈಗ ವಾಣಿಜ್ಯಾತ್ಮಕ ಒಪ್ಪಂದ ವನ್ನು ಮುಗಿಸಲಾಗಿದೆ ಎಂದು ಹೇಳಿದರು.

ಗಗನಯಾನಕ್ಕೆ ಸಹಾಯ: ಮೋದಿ ಮತ್ತು ಪುಟಿನ್‌ ಅವರ ಭೇಟಿ ವೇಳೆ ಗಗನಯಾನಕ್ಕೂ ಸಹಕಾರ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. 2022ಕ್ಕೆ ಭಾರತ ತನ್ನ ಮೊದಲ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದ್ದು, ಇವರಿಗೆ ರಷ್ಯಾ ತರಬೇತಿ ನೀಡಲಿದೆ. ಈ ಸಂಬಂಧ ಇಸ್ರೋ ಮತ್ತು ರಷ್ಯಾದ ಫೆಡರಲ್‌ ಸ್ಪೇಸ್‌ ಏಜೆನ್ಸಿ ಆಫ್ ರಷ್ಯಾ(ರೋಸ್ಕೋಸ್ಮೋಸ್‌) ನಡುವೆ ಒಪ್ಪಂದವಾಗಿದೆ.

ಏನಿದು ಎಸ್‌-400?: ಇದೊಂದು ಪ್ರತಿರೋಧಕ ಕ್ಷಿಪಣಿಯಾಗಿದ್ದು, ಎದುರಾಳಿ ದೇಶಗಳ ಯಾವುದೇ ಯುದ್ಧ ವಿಮಾನವನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದು ನೆಲದಿಂದ ಚಿಮ್ಮಿ ಆಕಾಶದಲ್ಲೇ ಬರುವ ಶತ್ರುದೇಶಗಳ ಟಾರ್ಗೆಟ್‌ ಅನ್ನು ಹೊಡೆದು ಹಾಕಬಲ್ಲದು. ಇದು ರಷ್ಯಾದ ಅತ್ಯಂತ ಆಧುನಿಕ ಮತ್ತು ಸುಧಾರಿತ ಕ್ಷಿಪಣಿ ಪ್ರತಿರೋಧ ವ್ಯವಸ್ಥೆಯಾಗಿದ್ದು, 380 ಕಿ.ಮೀ. ದೂರದಿಂದಲೇ ಶತ್ರುಗಳ ಬಾಂಬರ್‌, ಜೆಟ್‌, ಕ್ಷಿಪಣಿಗಳು ಮತ್ತು ಡ್ರೋಣ್‌ಗಳನ್ನು ಗುರುತಿಸಿ ನಾಶ ಮಾಡುತ್ತದೆ. ಇದರಲ್ಲಿನ ರಾಡಾರ್‌ 600 ಕಿ.ಮೀ. ದೂರದ ಟಾರ್ಗೆಟ್‌ ಅನ್ನು ಗುರುತಿಸುತ್ತದೆ. ಈ ಪ್ರತಿರೋಧ ಕ್ಷಿಪಣಿಯ ಇನ್ನೂ ವಿಶೇಷವೆಂದರೆ ಏಕಕಾಲದಲ್ಲಿ 72 ಕ್ಷಿಪಣಿಗಳನ್ನು ಉಡಾವಣೆ ಮಾಡ ಬಹುದು. ಅಲ್ಲದೆ 36 ಟಾರ್ಗೆಟ್‌ಗಳನ್ನು ನಾಶ ಮಾಡಬಹುದು.

ಎಷ್ಟು ದೇಶಗಳ ಬಳಿ ಇದೆ?: ಇದನ್ನು ಖರೀದಿ ಮಾಡಿದ ಮೊದಲ ದೇಶ ಚೀನ. 2014ರಲ್ಲೇ ಮಾತುಕತೆ ಮುಗಿದು ಇತ್ತೀಚೆಗಷ್ಟೇ ಪೂರೈಕೆಯೂ ಶುರುವಾಗಿದೆ. ಬಳಿಕ ಇತ್ತೀಚೆಗಷ್ಟೇ ಟರ್ಕಿ ದೇಶವೂ ಈ ಕ್ಷಿಪಣಿಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಕತಾರ್‌ ಕೂಡ ಈ ಕ್ಷಿಪಣಿಗಳ ಖರೀದಿಗಾಗಿ ಚಿಂತನೆ ನಡೆಸುತ್ತಿದೆ.

ಭಾರತಕ್ಕೆ ಏಕೆ ಬೇಕು?: ಇತ್ತೀಚೆಗಷ್ಟೇ ಮಾತನಾಡಿದ್ದ ವಾಯುಸೇನೆ ಮುಖ್ಯಸ್ಥ ಧನೋವಾ ಅವರು, ಎಸ್‌-400ರಿಂದ ಭಾರತೀಯ ವಾಯು ಸೇನೆಯ ಶಕ್ತಿ ಇಮ್ಮಡಿಗೊಳ್ಳಲಿದೆ ಎಂದಿದ್ದರು. ಪಾಕಿಸ್ಥಾನದ 20 ಸ್ಕ್ವಾಡ್ರನ್‌ ಫೈಟರ್ಸ್‌, ಎಫ್-16 ಯುದ್ಧವಿಮಾನಗಳು, ಜೆ-17 ಮತ್ತು ಚೀನದ 1,700 ಯುದ್ಧವಿಮಾನಗಳು, 4ನೇ ಪೀಳಿಗೆಯ 800 ಫೈಟರ್‌ಗಳನ್ನು ಎದುರಿಸಲು ಈ ವ್ಯವಸ್ಥೆ ಬೇಕು ಎಂದು ಹೇಳಿದ್ದರು.

ರಷ್ಯಾ- ಭಾರತ ನಡುವಿನ 8 ಒಪ್ಪಂದ
1. ವಿದೇಶಾಂಗ ಸಚಿವರ ನಡುವಿನ ಸಮಾಲೋಚನೆ ಶಿಷ್ಟಾಚಾರ
2. ಆರ್ಥಿಕ ಅಭಿವೃದ್ಧಿ
3. ಬಾಹ್ಯಾಕಾಶ ಸಹಭಾಗಿತ್ವ
4. ರೈಲ್ವೇ ಸಹಕಾರ
5. ಅಣು ವಲಯದಲ್ಲಿನ ಸಹಕಾರಕ್ಕಾಗಿ ಕ್ರಿಯಾಯೋಜನೆ
6. ಸಾರಿಗೆ ಕ್ಷೇತ್ರ
7. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಗಳ ವ್ಯಾಪಾರಕ್ಕಾಗಿ ಸಹಕಾರ
8. ರಸಗೊಬ್ಬರ ಸಹಕಾರ

 

About the author

ಕನ್ನಡ ಟುಡೆ

Leave a Comment