ರಾಜಕೀಯ

ಪುಟ್ಟರಂಗ ಶೆಟ್ಟಿ ರಾಜಿನಾಮೆಗೆ ಬಿಜೆಪಿ ಆಗ್ರಹ: ಸಚಿವರ ರಕ್ಷಣೆಗೆ ಸಿದ್ದರಾಮಯ್ಯ ಅಭಯ ಹಸ್ತ

ಮೈಸೂರು:  ಒಂದೆಡೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೇಶದ ಚೌಕಿದಾರ ಚೋರ್ ಆಗಿ ಬದಲಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ, ಮತ್ತೊಂದೆಡೆ ತಮ್ಮದೇ ಪಕ್ಷದ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ಸಿಬ್ಬಂದಿ ಮೋಹನ ಕುಮಾರ್‌ ಬಳಿ 25.76 ಲಕ್ಷ ರೂ. ಪತ್ತೆಯಾಗಿರುವುದು ಪಕ್ಷಕ್ಕೆ ಮುಜುಗರ ತಂದಿದೆ.
ಈ ನಡುವೆ ವಿಧಾನ ಸೌಧದಲ್ಲಿ ಹಣ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಸ್ ಅನ್ನು ಎಸಿಬಿ ಗೆ ವಹಿಸಿ, ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡುವಂತೆ ಒತ್ತಾಯಿಸಿರುವ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಉಪ್ಪಾರ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿದ್ದಾಗಿದೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿರುವ ಈ ಸಮುದಾಯದ ಜನ ಶೆಟ್ಟಿ ಪರವಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ, ತಮ್ಮ ಪಂಗಡದ ನಾಯಕನ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ನಾಯಕರು ಮಾಡುತ್ತಿರುವ ಭ್ರಷ್ಟಚಾರ ಆರೋಪದಿಂದಾಗಿ, ಪುಟ್ಟರಂಗ ಶೆಟ್ಟಿ ವಿರುದ್ಧ ಕ್ರಮ ಜರುಗಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಕಾಂಗ್ರೆಸ್ ದ್ವಂದ್ವದಲ್ಲಿ ಮುಳುಗಿದೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ.
ಮೈಸೂರು, ಚಾಮರಾಜನಗರ, ಗೋಕಾಕ್, ಚನ್ನಗಿರಿ, ಹೊಸದುರ್ಗ ಮತ್ತು ಅರಭಾವಿ ಸೇರಿದಂತೆ ಸುಮಾರು 15 ವಿಧಾನಸಭೆ ಕ್ಷೇತ್ರಗಳಲ್ಲಿ ಉಪ್ಪಾರ ಸಮುದಾಯದ ಪ್ರಾಬಲ್ಯ ಹೊಂದಿದೆ,  ಜೊತೆಗ 20 ಕ್ಷೇತ್ರಗಳಲ್ಲಿ ಕಟ್ಟೆಮನೆ ಮತ್ತು ಗದ್ದಿ ಮನೆ ಎಂಬ ಸಂಘಟನೆಗಳು ಈ ಸಮುದಾಯಗಳ ಮೇಲೆ ಹಿಡಿತ ಸಾಧಿಸಿವೆ.
ಪುಟ್ಟರಂಗ ಶೆಟ್ಟಿ ಅವರನ್ನು ಸಂಪುಟದಿಂದ ಕೈ ಬಿಟ್ಟರೇ ಕಾಂಗ್ರೆಸ್ ಗೆ ಬಹುದೊಡ್ಡ ಹಿನ್ನಡೆಯಾಗಲಿದೆ ಎಂಬುದನ್ನು ಮನಗಂಡಿರುವ ಕೈ ಮುಖಂಡರು, ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗುತ್ತಿಲ್ಲ, ಪುಟ್ಟರಂಗ ಶೆಟ್ಟಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅತ್ಯಂತ ನಿಷ್ಠರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಸಂಪುಟದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ,  ಸಿದ್ದರಾಮಯ್ಯ ಅವರ ಅಭಯ ಹಸ್ತ ಶೆಟ್ಟಿ ಮೇಲಿದೆ, ಹೀಗಾಗಿ ವಿವಾದದಿಂದ ಬಚಾವಾಗುವ ಸಾಧ್ಯತೆಗಳಿವೆ. ಶೆಟ್ಟಿ ಅವರನ್ನು ಈ ವಿವಾದಿಂದ ರಕ್ಷಿಸುವಂತೆ ಸಂಸದರು ಹಾಗೂ ಸಿದ್ದರಾಮಯ್ಯ ಅವರ ಮೇಲೆ ಸಮುದಾಯದ ಮುಖಂಡರು ಒತ್ತಡ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ, ಒಂದು ವೇಳೆ ಶೆಟ್ಟಿ ವಿರುದ್ಧ ಏನಾದರೂ ಕ್ರಮ ಜರುಗಿಸಿದರೇ ಅದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹೇಳಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment