ರಾಜಕೀಯ

ಪುತ್ರನ ಶೂಟಿಂಗ್‌ ವೀಕ್ಷಣೆಗಾಗಿ ಸಿಎಂ ಕುಮಾರಸ್ವಾಮಿ ಫ್ರಾನ್ಸ್‌ಗೆ: ಯಡಿಯೂರಪ್ಪ ಆರೋಪ

ಬೆಂಗಳೂರು: ಭೀಕರ ಬರದಿಂದ ರಾಜ್ಯದ ಜನ ಸಾಯುತ್ತಿದ್ದರೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪುತ್ರನ ಸಿನಿಮಾ ಶೂಟಿಂಗ್‌ ವೀಕ್ಷಣೆಗೆ ಫ್ರಾನ್ಸ್‌ಗೆ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ”ಪುತ್ರನ ಸಿನಿಮಾ ಚಿತ್ರೀಕರಣ ನೋಡಲು ಕುಮಾರಸ್ವಾಮಿ ಫ್ರಾನ್ಸ್‌ಗೆ ಹೋಗಿದ್ದಾರೆಂಬ ಮಾಹಿತಿ ಇದೆ. ಇದರ ಸತ್ಯಾಸತ್ಯತೆಯನ್ನು ಅವರೇ ಬಹಿರಂಗಗೊಳಿಸಬೇಕು. ಜನ ಇಲ್ಲಿ ಸಾಯುತ್ತಿದ್ದರೆ ಮುಖ್ಯಮಂತ್ರಿ ಹಾಗೂ ಸಚಿವರು ಹೊಸ ವರ್ಷಾಚರಣೆ ನೆಪದಲ್ಲಿ ವಿದೇಶ ಪ್ರವಾಸ ನಡೆಸುತ್ತಿದ್ದಾರೆ,” ಎಂದು ಆರೋಪಿಸಿದರು.

”ಹಿಂದಿನ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಕೃಷಿ ಭಾಗ್ಯ ಯೋಜನೆಯ ಕೃಷಿಹೊಂಡ ನಿರ್ಮಾಣ ಹಾಗೂ ಉಪಕರಣ ಹಂಚಿಕೆಯಲ್ಲಿ ಭಾರಿ ಗೋಲ್‌ಮಾಲ್‌ ನಡೆದಿದೆ. 131 ತಾಲೂಕುಗಳಲ್ಲಿ 2,15, 635 ರೈತರಿಗೆ ಕೃಷಿ ಭಾಗ್ಯ ಯೋಜನೆ ಲಭಿಸಬೇಕಿತ್ತು. 2014 ರಿಂದ 2018ರ ಅವಧಿಯಲ್ಲಿ ಈ ಯೋಜನೆಗಾಗಿ 1608 ಕೋಟಿ ರೂ. ಖರ್ಚಾಗಿದೆ. ಎಷ್ಟೋ ಕಡೆ ಹೊಂಡ ತೆಗೆದಿಲ್ಲ. ಇನ್ನು ಕೆಲವೆಡೆ ಹೊಂಡಗಳು ಮುಚ್ಚಿ ಹೋಗಿವೆ. ಇದೊಂದು ದೊಡ್ಡ ಹಗರಣವಾಗಿದ್ದು ಸಮಗ್ರ ತನಿಖೆಗೆ ಒಳಪಡಿಸಬೇಕು,” ಎಂದು ಒತ್ತಾಯಿಸಿದರು.

ಶಾ ಭೇಟಿ ಮಾಡಿಲ್ಲ : ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ನಮ್ಮನ್ನು ಸಂಪರ್ಕ ಮಾಡದೇ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಇದೆಲ್ಲ ಕೇವಲ ಊಹಾಪೋಹ. ನಾವು ಲೋಕಸಭಾ ಚುನಾವಣೆ ಸಿದ್ಧತೆಯಲ್ಲಿದ್ದೇವೆ. ಸರಕಾರ ರಚನೆಯತ್ತ ನಮ್ಮ ಗಮನವಿಲ್ಲ. ರಮೇಶ್‌ ಜಾರಕಿಹೊಳಿ ಸೋದರ ನೀಡಿದ ಹೇಳಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಎಂದು ಹೇಳಿದರು.

ಬಿಎಸ್‌ವೈ ಸಿಎಂ ಆಗುವುದಾದರೆ ಯಾರು ಬೇಕಾದರೂ ಪಕ್ಷಕ್ಕೆ ಬರಲಿ ಯಡಿಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದಿದ್ದರೆ ಯಾರು ಬೇಕಾದರೂ ಪಕ್ಷಕ್ಕೆ ಬರಲಿ ಎಂದು ಶಾಸಕ ಸೋಮಶೇಖರ್‌ ರೆಡ್ಡಿ ಹೇಳಿದ್ದಾರೆ.’ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದಾದರೆ ನಾವು ಎಲ್ಲರನ್ನೂ ಪಕ್ಷಕ್ಕೆ ಸ್ವಾಗತಿಸುತ್ತೇವೆ. ನಾಗೇಂದ್ರ, ಆನಂದ್‌ ಸಿಂಗ್‌ ಪಕ್ಷ ಸೇರುವುದಕ್ಕೆ ನಮ್ಮ ವಿರೋಧವಿಲ್ಲ. ಅವರು ನಮ್ಮ ಹಳೆ ದೋಸ್ತಿಗಳು. ಆದರೆ ಅವರಾರ‍ಯರು ನನ್ನ ಸಂಪರ್ಕದಲ್ಲಿ ಇಲ್ಲ,” ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment